ಚಿಕ್ಕಮಗಳೂರು ಟಿಕೆಟ್: ಶೋಭಾ ಕರಂದ್ಲಾಜೆಗೆ ಯಡಿಯೂರಪ್ಪ ಸಪೋರ್ಟ್

Krishnaveni K

ಶನಿವಾರ, 2 ಮಾರ್ಚ್ 2024 (16:14 IST)
Photo Courtesy: Twitter
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ತೀವ್ರ ಪೈಪೋಟಿಯಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡುವುದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೆಂಬಲವಾಗಿ ನಿಂತಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಸಚಿವ ಸಿಟಿ ರವಿ, ಪ್ರಮೋದ್ ಮಧ‍್ವರಾಜ್, ಶಾಸಕ ಡಿಎನ್ ಜೀವರಾಜ್ ನಡುವೆ ತೀವ್ರ ಪೈಪೋಟಿಯಿದೆ. ಜೊತೆಗೆ ಇಲ್ಲಿ ಇತ್ತೀಚೆಗೆ ಶೋಭಾ ಕರಂದ್ಲಾಜೆ ವಿರೋಧಿ ಅಲೆ ಕಂಡುಬಂದಿದೆ. ಕಾರ್ಯಕರ್ತರೇ ಶೋಭಾ ಕರಂದ್ಲಾಜೆ ವಿರುದ್ಧ ನಿಂತಿದ್ದಾರೆ.

ಹೀಗಾಗಿ ಹಾಲಿ ಸಂಸದೆಗೆ ಹ್ಯಾಟ್ರಿಕ್ ಗೆಲುವು ಕಷ್ಟ ಎನ್ನಲಾಗುತ್ತಿದೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಮಾತ್ರ ಶೋಭಾ ಕರಂದ್ಲಾಜೆಗೆ ಬೆಂಬಲವಾಗಿ ನಿಂತಿದ್ದಾರೆ. ಅಲ್ಲದೆ, ಗೋ ಬ್ಯಾಕ್ ಶೋಭಾ ಎಂದು ಅಭಿಯಾನ ನಡೆಸಿದ ಕಾರ್ಯಕರ್ತರ ವಿರುದ್ಧವೇ ಸಿಡಿದೆದ್ದಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರ ಬಿಜೆಪಿಯ ಭದ್ರಕೋಟೆಗಳಲ್ಲಿ ಒಂದು. ಇಲ್ಲಿ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಆದರೆ ಇಲ್ಲಿ ಈಗ ಶೋಭಾ ವಿರುದ್ಧ ಮೂಡಿರುವ ಭಿನ್ನಮತದ ರಾಗ ಚುನಾವಣೆಯಲ್ಲಿ ಮುಳುಗವಾಗಬಹುದು ಎನ್ನಲಾಗಿದೆ. ಹೀಗಾಗಿ ಸ್ಥಳೀಯ ನಾಯಕರು, ಕಾರ್ಯಕರ್ತರನ್ನು ಎದುರು ಹಾಕಿಕೊಂಡು ಶೋಭಾಗೆ ಇಲ್ಲಿ ಚುನಾವಣೆ ಗೆಲ್ಲುವುದು ಸುಲಭವಲ್ಲ. ಹೀಗಾಗಿ ಯಡಿಯೂರಪ್ಪ ಬೆಂಬಲ ಅವರಿಗೆ ಆನೆಬಲ ತಂದಂತಾಗಿದೆ.

ಶೋಭಾ ಪರವಾಗಿ ಬ್ಯಾಟ್ ಬೀಸಿರುವ ಯಡಿಯೂರಪ್ಪ ನಮಗೆ ಶೋಭಾ ಅವರನ್ನು ಬದಲಿಸುವ ಉದ್ದೇಶವಿಲ್ಲ ಎಂದಿದ್ದಾರೆ. ಅಲ್ಲದೆ, ಗೋ ಬ್ಯಾಕ್ ಎಂದು ಕೂಗಿದವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪಗೆ ಕೇಂದ್ರ ಮಟ್ಟದಲ್ಲೂ ಭಾರೀ ಪ್ರಭಾವವಿದೆ. ಹೀಗಾಗಿ ಅವರ ಹೇಳಿಕೆ, ಅಭಿಪ್ರಾಯಕ್ಕೆ ಅಷ್ಟೇ ಬೆಲೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ