ನೆಗೆಟಿವ್ ಇಲ್ಲದೆ ಬೆಂಗಳೂರಿಗೆ ಬಂದ್ರೆ ಕ್ವಾರಂಟೈನ್ ಕಡ್ಡಾಯ!
ಬುಧವಾರ, 4 ಆಗಸ್ಟ್ 2021 (07:58 IST)
ಬೆಂಗಳೂರು(ಆ.04): ಕೇರಳ, ಮಹಾರಾಷ್ಟ್ರ ಸೇರಿದಂತೆ ಕೋವಿಡ್-19 ಸೋಂಕು ಹೆಚ್ಚಿರುವ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಕೋವಿಡ್ ವರದಿ ನೆಗೆಟಿವ್ ಇಲ್ಲದ ಪ್ರಯಾಣಿಕರನ್ನು ಇನ್ನುಮುಂದೆ ಪಾಲಿಕೆ ಅಧಿಕಾರಿಗಳು ಕ್ವಾರಂಟೈನ್ಗೆ ಒಳಪಡಿಸಲಿದ್ದಾರೆ.
ಗಡಿ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ವರದಿ ಕಡ್ಡಾಯ ಮಾಡಲಾಗಿದೆ. ಪ್ರಯಾಣಿಕರು 72 ಗಂಟೆಗಳ ಒಳಗೆ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿರಬೇಕು. ಪರೀಕ್ಷೆ ವರದಿ ತರದ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ವರದಿ ಬರುವವರೆಗೂ ಕ್ವಾರಂಟೈನ್ನಲ್ಲಿ ಇರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಆರೈಕೆ ಕೇಂದ್ರಗಳು ಮತ್ತು ನಗರದ ಕೆಲ ಖಾಸಗಿ ಹೋಟೆಲ್ಗಳಲ್ಲಿ ಪ್ರಯಾಣಿಕರಿಗೆ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿದೆ. ಆರ್ಥಿಕವಾಗಿ ಸಬಲರಲ್ಲದವರು ಕೋವಿಡ್ ಆರೈಕೆ ಕೇಂದ್ರದಲ್ಲಿ ಕ್ವಾರಂಟೈನ್ ಆಗಬಹುದು. ಸ್ಥಿತಿವಂತರಿಗೆ ಹೋಟೆಲ್ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಿದ್ದು, ಪ್ರಯಾಣಿಕರಿಗೆ ಅನುಕೂಲಕರವಾದ ದರಗಳನ್ನು ನಿಗದಿಪಡಿಸಲು ಹೋಟೆಲ್ ಮಾಲಿಕರ ಸಂಘದೊಂದಿಗೆ ಚರ್ಚೆ ನಡೆಸಲಾಗಿದೆ. ಬುಧವಾರ ದರ ನಿಗದಿ ಅಂತಿಮಗೊಳ್ಳಲಿದ್ದು, ದರ ಪಟ್ಟಿಪ್ರಕಟಿಸಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಪ್ರಯಾಣಿಕರು ಏನು ಮಾಡಬೇಕು?
ಮಹಾರಾಷ್ಟ್ರ, ಕೇರಳದಿಂದ ಬಸ್, ರೈಲು, ವಿಮಾನದಲ್ಲಿ ಬೆಂಗಳೂರಿಗೆ ಬರುವ ಪ್ರಯಾಣಿಕರು 72 ಗಂಟೆಯ ಒಳಗಿನ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ವರದಿ ತರದ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ವರದಿ ಬರುವವರೆಗೂ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ