ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸೈಕಲ್ ಜಾಥಾ ಮೂಲಕ ಸರಕಾರವನ್ನು ಎಚ್ಚರಿಸುವ ಕೆಲಸ ನಡೆಯುತ್ತಿದೆ. ನಮ್ಮ ರಾಜ್ಯ ಸಂಕಷ್ಟದಲ್ಲಿದೆ. ರೈತರು ಸಹ ಸಂಕಷ್ಟದಲ್ಲಿದ್ದಾರೆ. ಕಳೆದ 6 ತಿಂಗಳಿನಿಂದ ರೈತರು ಬರಗಾಲದಿಂದ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಸರಕಾರದ ನಿರ್ಧಾರಗಳಿಂದ ಸಾಮಾನ್ಯ ಜನರ ಮೇಲೆ ಹೊರೆ ಆಗುತ್ತಿದೆ ಎಂದು ಆಕ್ಷೇಪಿಸಿದರು. ಇದು ಅಕ್ಷಮ್ಯ ಅಪರಾಧ ಎಂದರು.
ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ಭಂಡತನದ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣದರ ಏರಿಕೆ-ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಬಗ್ಗೆ ಸಚಿವರು ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಿರ್ಧಾರ ರಾಜ್ಯದ ಜನರಿಗೆ ಶಾಪವಾಗಿ ಪರಿಣಮಿಸಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸರಕಾರದ ನಿರ್ಧಾರದ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಹೋರಾಟ ಮಾಡುತ್ತಿದೆ.
ಮುಖ್ಯಮಂತ್ರಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವವರೆಗೆ ಈ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದರು. ರಸ್ತೆ ತಡೆ ಮಾಡಿದರೆ, ಲಾಠಿ ಚಾರ್ಜ್ ಮಾಡುವುದಾಗಿ ಗೃಹ ಸಚಿವರ ಹೇಳಿಕೆಯ ಕುರಿತು ಗಮನ ಸೆಳೆದಾಗ, ಅದು ಮೂರ್ಖತನದ ಪರಮಾವಧಿ ಎಂದು ತಿಳಿಸಿದರು. ಬಿಜೆಪಿ, ಬಿಜೆಪಿ ಕಾರ್ಯಕರ್ತರು ಲಾಠಿಗೆ, ಯಾವುದಕ್ಕೂ ಹೆದರುವುದಿಲ್ಲ; ರಾಜ್ಯದ ಜನರು, ರೈತರು, ಬಡವರ ಪರವಾಗಿ ಧ್ವನಿ ಎತ್ತುವ ಕೆಲಸವನ್ನು ಮಾಡುವವರ ವಿರುದ್ಧ ಲಾಠಿ ಪ್ರಹಾರ ಮಾಡುವುದಾದರೆ ಇದು ದರ್ಪದ ಕ್ರಮ. ಅಧಿಕಾರದ ಅಹಂನಿಂದ ಈ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.