ಬೆಂಬಲಿಗರ ಅಸಮಾಧಾನ ಸ್ಫೋಟಗೊಳ್ಳುವುದನ್ನು ತಡೆದ ಬಿಎಸ್‌ವೈ

ಭಾನುವಾರ, 7 ಮೇ 2017 (15:06 IST)
ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಕೊನೆಯ ದಿನವಾದ ಇಂದು ಬೆಂಬಲಿಗರ ಅಸಮಾಧಾನ ಸ್ಫೋಟಗೊಳ್ಳುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಡೆಯುವಲ್ಲಿ ಯಶಸ್ವಿಯಾದರು.
 
ಪಂಡೀತ ದೀನ ದಯಾಳ್ ಜನ್ಮಶತಾಬ್ದಿ ಕುರಿತು ನಿರ್ಣಯ ಮಂಡಿಸಿದ ಬಿಜೆಪಿ ರಾಷ್ಟ್ರೀಯ ಸಂಘಟಕ ಬಿ.ಎಲ್.ಸಂತೋಷ್ ನಿರ್ಣಯ ಮಂಡಿಸಿ, ಶಾಸಕರು, ಸಂಸದರು, ಮುಖಂಡರು 15 ದಿನಗಳ ಕಾಲ ಸ್ವಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದಾಗ ಕಾರ್ಯಕಾರಿಣಿಯಲ್ಲಿ ಅಸಮಾಧಾನದ ಹೊಗೆ ಎದ್ದಿತು.
 
ನಾವು ಸನ್ಯಾಸಿಗಳಲ್ಲ, 15 ದಿನಗಳ ಕಾಲ ಮನೆಯಿಂದ ಹೊರಗಿದ್ದಲ್ಲಿ ಪತ್ನಿಗೆ ಡಿವೋರ್ಸ್ ಕೊಡಬೇಕಾಗುತ್ತದೆ ಎಂದು ಯಡಿಯೂರಪ್ಪ ಬಣದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
 
ಬೆಂಬಲಿಗರು ಅಸಮಾಧಾನಗೊಂಡಿರುವುದನ್ನು ಕಂಡ ಯಡಿಯೂರಪ್ಪ ಕೈ ಸನ್ನೆ ಮಾಡಿ ಸುಮ್ಮನೆ ಕೂರುವಂತೆ ಸೂಚನೆ ನೀಡಿದರು. ಇದರಿಂದ ಅವರ ಬೆಂಬಲಿಗರು ಮೌನವಹಿಸಿದರೂ ಕಾರ್ಯಕಾರಿಣಿಯಲ್ಲಿ ಸಂತೋಷ್ ವಿರುದ್ಧ ಗುಸು ಗುಸು ಮುಂದುವರೆದಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ