ಹುಬ್ಬಳ್ಳಿ: ಹಲವು ಗೊಂದಲಗಳ ನಡುವೆ ಜಾತಿ ಸಮೀಕ್ಷೆಗೆ ಮುಂದಾಗಿರು ರಾಜ್ಯ ಸರ್ಕಾರದ ವಿರುದ್ಧ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡಿ ಸರ್ಕಾರ ಏನು ಸಾಧಿಸಲು ಹೊರಟಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸಬೇಕು. ಆ ನಂತರ ಕಾನೂನು ತಜ್ಞರ ಸಮಿತಿ ರಚಿಸಿ, ಸಮಾಜದ ಹಿರಿಯರ ಜತೆ ಚರ್ಚಿಸಿ ಸಮೀಕ್ಷೆ ನಡೆಸಬೇಕು. ಏಕೆಂದರೆ ಇದು 7ಕೋಟಿ ಕನ್ನಡಿಗರ ಭವಿಷ್ಯದ ಪ್ರಶ್ನೆ ಎಂದರು.
ಹಿಂದುಳಿದ ವರ್ಗಗಳ ಆಯೋಗವು ಜಾತಿ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಲಿಂಗಾಯತ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂಬ ದೋಷಗಳನ್ನು ಉಳಿಸಿದೆ. ಒಳಪಂಗಡಗಳಲ್ಲಿ, ಲಿಂಗಾಯತ ಅಗಸಕ್ಕೆ ಒಂದು ಕೋಡ್ , ಅಗಸ ಲಿಂಗಾಯಕ್ಕೆ ಇನ್ನೊಂದು ಕೋಡ್ ನೀಡಲಾಗಿದೆ. ಅಗಸ ಕ್ರಿಶ್ಚಿಯನ್ ಎಂದು ಬರೆಸಿದವರನ್ನು ಯಾವ ಧರ್ಮದವರೆಂದು ಪರಿಗಣಿಸಬೇಕೆಂದು ಪ್ರಶ್ನೆ ಮಾಡಿದ್ದಾರೆ.
ಪಂಚಮಸಾಲಿ ಪೀಠ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸುವಂತೆ ನಿರ್ಣಯವನ್ನು ಕೈಗೊಂಡಿದೆ.
16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಸಮಾಜದವರ ಅಭಿಪ್ರಾಯ ಆಲಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮಠದಲ್ಲಿ ಕುಳಿತು ನಿರ್ಧಾರ ಮಾಡಿಲ್ಲ. ಈ ಬಗ್ಗೆ ಸಮುದಾಯದವರ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.