ಕೆಲವೇ ಗಂಟೆಗಳಲ್ಲಿ ಕಾವೇರಿ ರಕ್ಷಣಾ ಕಾರ್ಯಾಚರಣೆ ಅಂತ್ಯ

ಸೋಮವಾರ, 24 ಏಪ್ರಿಲ್ 2017 (08:28 IST)
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಬಾಲಕಿ ಕಾವೇರಿ ರಕ್ಷಣಾ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.

23 ಅಡಿ ಆಳದಲ್ಲಿ ಬಾಲಕಿ ಸಿಲುಕಿದ್ದು,  ಕೊಳವೆಬಾವಿಯ ಪಕ್ಕದಲ್ಲಿ 26 ಅಡಿ ಗುಂಡಿ ತೆಗೆದು ಬಾಲಕಿ ಕಳಗೆ ಜಾರದಂತೆ ತಡೆದು ಸುರಂಗದ ಮೂಲಕವೇ ಬಾಲಕಿಯನ್ನ ಹೊರತರುವ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗುಂಡಿಯಿಂದ ಬೋರ್`ವೆಲ್`ಗೆ 5 ಅಡಿ ಸುರಂಗ ಕೊರೆಯಬೇಕಿದ್ದು, 1 ಅಡಿ ಕೊರೆಯಲಾಗಿದ್ದು, 4 ಅಡಿ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಬಂಡೆಗಲ್ಲು ಮತ್ತೆ ಅಡ್ಡ ಬಂದಿರುವುದರಿಂದ ಹಿಟಾಚಿಗಳಿಂದ ಬಂಡೆ ಒಡೆಯುವ ಕಾರ್ಯ ನಡೆಯುತ್ತಿದೆ.

7 ಅಗ್ನಿಶಾಮಕ ದಳ, ಸಾಂಗ್ಲಿ ಹೆಲ್ಪ್ ಲೈನ್ ತಂಡ, ಹಟ್ಟಿ ಚಿನ್ನದ ಗಣಿ ತಂಡ, ಎನ್`ಡಿಆರ್`ಎಫ್ ಸೇರಿ 500 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ಮಧ್ಯೆ ಕ್ಯಾಮೆರಾದಲ್ಲಿ ಬಾಲಕಿಯ ಚಲನವಲನದ ಬಗ್ಗೆ ನಿಗಾ ಇಡಲಾಗುತ್ತಿದೆ. ಇವತ್ತು ಬಾಲಕಿಯ ಎರಡೂ ಕೈಗಳು ಕಾಣುತ್ತಿವೆ. ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ಮುಗಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇತ್ತ, ಮಗಳಿಗಾಗಿ ಅತ್ತೂ ಅತ್ತೂ ಅನ್ನ ಆಹಾರ ಬಿಟ್ಟು ಅಸ್ವಸ್ಥರಾಗಿರುವ ತಾಯಿ ಸವಿತಾಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಮಧ್ಯೆ, ಮಾಧ್ಯಮಗಳ ಜೊತೆ ಮಾತನಾಡಿರುವ ಸವಿತಾ, ನನ್ನ ಮಗಳು ಬದುಕಿ ಬರುತ್ತಾಳೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ