ಕಾವೇರಿ ನೀರು ಯೋಜನೆ ಕ್ರೆಡಿಟ್ ಕಾಂಗ್ರೆಸ್ ಗಲ್ಲ, ಬಿಜೆಪಿಗೆ ಸೇರಬೇಕು: ಆರ್ ಅಶೋಕ್ ನೀಡಿದ ಕಾರಣವಿದು

Sampriya

ಬುಧವಾರ, 16 ಅಕ್ಟೋಬರ್ 2024 (17:13 IST)
Photo Courtesy X
ಬೆಂಗಳೂರು: ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯ ಕ್ರೆಡಿಟ್ ಬಿಜೆಪಿಗೆ ಸಲ್ಲಬೇಕು ಎಂದು ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ.ಕೆ.ಹಳ್ಳಿಯಲ್ಲಿ ಇವತ್ತು ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯನ್ನು ಉದ್ಘಾಟಿಸುತ್ತಿದ್ದಾರೆ. ತಾವೇ ಮುತುವರ್ಜಿ ವಹಿಸಿ ಹಣ ಬಿಡುಗಡೆ ಮಾಡಿ, ಕ್ರಿಯಾ ಯೋಜನೆ ಮಾಡಿ ಕೆಲಸ ಅನುಷ್ಠಾನಕ್ಕೆ ತಂದಿರುವುದಾಗಿ ಜಂಬ ಕೊಚ್ಚಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ಅವರೇನೇ ಹೇಳಿದರೂ ಸರಕಾರಿ ದಾಖಲೆಗಳು ಮಾತನಾಡುತ್ತವೆ. 2018 ಜನವರಿ 24ರಂದು ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ 5,500 ಕೋಟಿ ಮೊತ್ತದ ಸಾಲದ ಒಪ್ಪಂದಕ್ಕೆ ಸಹಿ ಹಾಕಿದ್ದರು. 90 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿತ್ತು ಎಂದು ವಿವರಿಸಿದರು. ಓರಿಯೆಂಟಲ್ ಕನ್ಸಲ್ಟೇಶನ್ ಮೊದಲಾದ ಕಂಪೆನಿಗಳಿಗೆ ಯೋಜನೆ ನಿರ್ವಹಿಸಲು ನೀಡಲಾಗಿತ್ತು ಎಂದರು.

ಯೋಜನೆ ಪ್ರಾರಂಭವಾದ ದಿನ 2019ರಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಗುತ್ತಿಗೆ ಪ್ಯಾಕೇಜ್ ಮಾಡಿದ್ದು, ಪ್ಯಾಕೇಜ್ 2ನಲ್ಲಿ ನಿತ್ಯ 77.5 ಕೋಟಿ ಲೀಟರ್ ನೀರು ಶುದ್ಧೀಕರಣ ಘಟಕ, ಪ್ಯಾಕೇಜ್ 3ರÀಲ್ಲಿ ಟಿಕೆ ಹಳ್ಳಿ ಪಂಪಿಂಗ್ ಸ್ಟೇಶನ್, ಪ್ಯಾಕೇಜ್ 4ರÀಲ್ಲಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ 2 ಪಂಪಿಂಗ್ ಸ್ಟೇಶನ್ ನಿರ್ಮಾಣಕ್ಕೆ, ಟಿಕೆಹಳ್ಳಿ, ಹಾರೋಹಳ್ಳಿವರೆಗೂ ಪೈಪ್‍ಲೈನ್, ಹಾರೋಹಳ್ಳಿಯಿಂದ ವಾಜರಹಳ್ಳಿವರೆಗೂ ಪೈಪ್‍ಲೈನ್, ನಗರದ ಪಶ್ಚಿಮ ಭಾಗದಲ್ಲಿ ಪೈಪ್‍ಲೈನ್, ನೆಲಮಟ್ಟದ ಜಲಾಗಾರ, 13ನೆಯದು ಪಶ್ಚಿಮ ಭಾಗದಲ್ಲಿ ನೆಲಮಟ್ಟದ ಜಲಾಗಾರ ನಿರ್ಮಿಸಲು ಉದ್ದೇಶಿಸಲಾಗಿತ್ತು ಎಂದು ವಿವರ ನೀಡಿದರು. ಇಷ್ಟಕ್ಕೂ ಹಣ ಪಡೆದು, ಸಾಲ ಪಡೆದು ಜಪಾನ್‍ನ ಕಂಪೆನಿ, ಓರಿಯೆಂಟಲ್ ಮೊದಲಾದ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡು ಯೋಜನೆಗಳನ್ನು ಕೂಡ ಪ್ರಾರಂಭ ಮಾಡಿದ್ದೆವು ಎಂದು ತಿಳಿಸಿದರು.

ಕೆಲಸ ಕಾರ್ಯ ವಿಷಯ ಮುಚ್ಚಿಟ್ಟ ಕಾಂಗ್ರೆಸ್ಸಿಗರು..
ಬಳಿಕ ಬಸವರಾಜ ಬೊಮ್ಮಾಯಿಯವರ ಸರಕಾರ ಬಂತು. ನಾನು ಅದರಲ್ಲಿ ಸಚಿವನಾಗಿದ್ದೆ. ಶೇ 80ರಷ್ಟು ಕೆಲಸವನ್ನು ನಾವೇ ಮಾಡಿದ್ದು ಎಂದು ಪ್ರತಿಪಾದಿಸಿದರು. ಇವರು ಬಂದು ಒಂದು ವರ್ಷ ಆಗಿದೆ. ಅಲ್ಲಿ ನೆರೆ ಬಂದಾಗ ನಾನು, ಬೊಮ್ಮಾಯಿಯವರು ಭೇಟಿ ಕೊಟ್ಟಿದ್ದೆವು. ಪ್ಯಾಕೇಜ್‍ಗೆ ಡಿಪಿಆರ್ ಮಾಡಿದ್ದು ಯಾರು? ಹಣ ಹೊಂದಿಸಿ ಕೊಟ್ಟದ್ದು ಯಾರು? ಯಾರ ಸರಕಾರದಲ್ಲಿ ಕೆಲಸ ಆರಂಭವಾಯಿತು ಎಂಬುದನ್ನೆಲ್ಲ ಮುಚ್ಚಿಟ್ಟಿದ್ದಾರೆ. ದೇವರನ್ನು ಕೂರಿಸಿದ್ದು ನಾವು, ಹೋಮ ಹವನ ಮಾಡಿದ್ದು ನಾವು, ಮಂಗಳಾರತಿ ಟೈಮಿನಲ್ಲಿ ಇವರು ಬಂದು ನಮ್ಮದು ಎಂದಿದ್ದಾರೆ ಎಂದು ಆರ್.ಅಶೋಕ್ ಅವರು ಟೀಕಿಸಿದರು.

110 ಹಳ್ಳಿಗಳನ್ನು ಪಾಲಿಕೆಗೆ ನಾವೇ ಸೇರಿಸಿದ್ದು; ಕಾಂಗ್ರೆಸ್ಸಿಗರು ಸೇರಿಸಿಲ್ಲ ಎಂದು ತಿಳಿಸಿದ ಅವರು, ನಾನು ಆಗ ಆರೋಗ್ಯ ಸಚಿವ ಮತ್ತು ಬೆಂಗಳೂರು ಇನ್ ಚಾರ್ಜ್ ಸಚಿವನಾಗಿದ್ದೆ ಎಂದು ನೆನಪಿಸಿದರು. ಕನ್ನಡ ಉಳಿಯಲು ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಬೇಕೆಂಬ ಉದ್ದೇಶ ಅದರ ಹಿಂದಿತ್ತು ಎಂದು ನುಡಿದರು.

ಆಗ ರಸ್ತೆ, ಸ್ಯಾನಿಟರಿ ವ್ಯವಸ್ಥೆಗೆ ಹಣವನ್ನೂ ಬಿಡುಗಡೆ ಮಾಡಿದ್ದೆವು. ಮಂಗಳಾರತಿ ತೆಗೆದುಕೊಳ್ಳಲು ಬಂದಿದ್ದೀರಿ ಎಂದು ಟೀಕಿಸಿದ ಅವರು, ಬೆಂಗಳೂರು ಬಗ್ಗೆ ಇವರಿಗೆ ಅಭಿಮಾನ ಇದೆಯೇ ಇಲ್ಲವೇ ಎಂದು ಪ್ರಶ್ನಿಸಿದರು. ಬೊಮ್ಮಾಯಿಯವರು ಸಿಎಂ ಆಗಿದ್ದಾಗ ರಸ್ತೆ ನಿರ್ಮಾಣಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದೆವು. ಕಾಮಗಾರಿ ಗುರುತಿಸಿ ಟೆಂಡರ್ ಕರೆದು ಕೆಲಸ ಪ್ರಾರಂಭಿಸಲು ಮುಂದಾಗಿದ್ದೆವು. ರಾಜಕಾಲುವೆಗಳಿಗೆ 1600 ಕೋಟಿ ಬಿಡುಗಡೆ ಮಾಡಿದ್ದೆವು ಎಂದರು.

ಬಿಜೆಪಿ ಶಾಸಕರಿಗೆ ನಾವು ಕೊಟ್ಟಿದ್ದ ಹಣ ವಾಪಸ್..
ನೀವು ಬಂದು ಬ್ರ್ಯಾಂಡ್ ಬೆಂಗಳೂರು ಮಾಡುವ ಮಾತನಾಡಿದ್ದೀರಿ. ಅದಕ್ಕೆ 60-70 ಸಾವಿರ ಕೋಟಿ ಬೇಕಾಗುತ್ತಿತ್ತು. ನೀವು ಅಧಿಕಾರಕ್ಕೆ ಬಂದು ನಾವು ಬಿಡುಗಡೆ ಮಾಡಿದ್ದ 8 ಸಾವಿರ ಕೋಟಿ, 1600 ಕೋಟಿಯನ್ನು ವಾಪಸ್ ಪಡೆದಿರಿ ಎಂದು ಆಕ್ಷೇಪಿಸಿದರು. ನನ್ನ ಪದ್ಮನಾಭನಗರದಲ್ಲಿ 70 ಕೋಟಿಯ ಫ್ಲೈಓವರ್ ಸಂಬಂಧಿಸಿದ ಹಣವನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿ ಶಾಸಕರಿಗೆ ನಾವು ಕೊಟ್ಟಿದ್ದ ಹಣ ವಾಪಸ್ ಪಡೆದಿದ್ದಾರೆ ಎಂದು ಆರ್.ಅಶೋಕ್ ಅವರು ಆಪಾದಿಸಿದರು.

ರಾಜ್ಯ ಸರಕಾರದಿಂದ ಒಂದು ನಯಾಪೈಸೆಯೂ ನೀಡಿಲ್ಲ. 2009ರಲ್ಲಿ ಯಡಿಯೂರಪ್ಪ ಅವರಿದ್ದಾಗ ವಿಶೇóಷ ಅನುದಾನ ಕೊಟ್ಟಿದ್ದರು. ಬಿಡಿಎದಲ್ಲಿದ್ದ 1 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬೆಂಗಳೂರಿನ ಅಭಿವೃದ್ಧಿಗೆ ಕೊಟ್ಟದ್ದಲ್ಲದೆ ಸರಕಾರದಿಂದಲೂ ಹಣ ಕೊಡಲಾಗಿತ್ತು. ಬೊಮ್ಮಾಯಿಯವರು ಬಂದಾಗ ಈ ಮೊತ್ತ 8 ಸಾವಿರಕ್ಕೆ ಹೆಚ್ಚಿತು ಎಂದು ವಿವರಿಸಿದರು.

ಉಡಾಫೆ ಹೇಳುವುದರಲ್ಲಿ ಸಿದ್ದರಾಮಯ್ಯನವರು ನಂಬರ್ ವನ್. ಮಾಧ್ಯಮದವರು ಪ್ರಶ್ನಿಸಿದರೆ ನೀನು ಬಿಜೆಪಿನಾ ಎಂದು ಬೆದರಿಸುತ್ತಾರೆ.

ಬೊಮ್ಮಾಯಿಯವರು, ಯಡಿಯೂರಪ್ಪನವರಿದ್ದಾಗ ಅವಧಿಯಲ್ಲಿ ನೀಡಿದ ಅನುದಾನವನ್ನು ಹೋಲಿಸಿ ನೋಡೋಣ ಎಂದು ಸವಾಲೆಸೆದರು. ನೀವು ಕಳೆದ ಒಂದೂವರೆ ವರ್ಷದಲ್ಲಿ ನೀವೆಷ್ಟು ಹಣ ಬಿಡುಗಡೆ ಮಾಡಿದ್ದೀರಿ? ಕೇಂದ್ರ ಸರಕಾರ ಎಷ್ಟು ಹಣ ಕೊಟ್ಟಿದೆ ಎಂದು ಹೇಳಿ ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ರಾಜ್ಯದ ವಿಚಾರದಲ್ಲಿ ತಾರತಮ್ಯ ಮಾಡಿದೆ ಎನ್ನುವ ಕಾಂಗ್ರೆಸ್ ಸರಕಾರ ತಮ್ಮ ಮನೆಯಲ್ಲಿ ಏನು ಮಾಡಿದೆ? ರಾಜ್ಯ ಸರಕಾರಕ್ಕೆ ಬೆಂಗಳೂರಿನಿಂದ ಎಷ್ಟು ಹಣ ಬರುತ್ತಿದೆ? ಬೊಕ್ಕಸಕ್ಕೆ ಶೇ 60 ಮೊತ್ತ ಬೆಂಗಳೂರಿನಿಂದ ಬರುತ್ತದೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲಬುರ್ಗಿಯಿಂದ ಎಷ್ಟು ಹಣ ಬರುತ್ತದೆ? ಎಂದು ಹೇಳುವಂತೆ ಒತ್ತಾಯಿಸಿದರು. ಕೇಂದ್ರ ಸರಕಾರದಿಂದ ಜಿಎಸ್‍ಟಿ ಕೇಳುವ ನೀವು ಇಲ್ಲಿನ ಕುರಿತು ಮಾಹಿತಿ ಕೊಡಿ ಎಂದು ಆಗ್ರಹಿಸಿದರು.

ಭಾರತ ಅಭಿವೃದ್ಧಿ ಆಗಲು ಎಲ್ಲ ರಾಜ್ಯ ಅಭಿವೃದ್ಧಿ ಆಗಬೇಕು. ಹಾಗೇ ಕರ್ನಾಟಕದ ಅಭಿವೃದ್ಧಿಗೆ 224 ಕ್ಷೇತ್ರ ಅಭಿವೃದ್ಧಿ ಆಗಬೇಕು. 224 ಕ್ಷೇತ್ರ ಅಭಿವೃದ್ಧಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಿದ್ದೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಎಸ್.ಸಿ. ಮೋರ್ಚಾ ರಾಜ್ಯ  ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ