ಬೆಂಗಳೂರು: ಪಿಎಸ್ ಐ ಪರಶುರಾಮ್ ಅನುಮಾನಾಸ್ಪದ ಸಾವು ವಿವಾದಲ್ಲಿರುವಾಗಲೇ ಈಗ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ತಿಮ್ಮೇಗೌಡ ಎಂಬವರು ನೇಣಿಗೆ ಶರಣಾಗಿದ್ದು ದೊಡ್ಡ ವಿವಾದವಾಗುವ ಲಕ್ಷಣಗಳಿವೆ.
ವಾಲ್ಮೀಕಿ ನಿಗಮ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಬಳಿಕ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಅಧಿಕಾರಿಗಳ ವರ್ಗಾವಣೆಗೆ ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಪೇದೆಯಿಂದ ಹಿಡಿದು ದೊಡ್ಡ ಹಂತದ ಅಧಿಕಾರಿವರೆಗೆ ವರ್ಗಾವಣೆಗೆ ಇಂತಿಷ್ಟು ಎಂದು ಕಮಿಷನ್ ಫಿಕ್ಸ್ ಆಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇದರ ಬೆನ್ನಲ್ಲೇ ಈಗ ಸಿಸಿಬಿ ಅಧಿಕಾರಿ ತಿಮ್ಮೇಗೌಡ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ. ಬಿಡದಿ ಬಳಿ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಸಿಸಿಬಿ ಆರ್ಥಿಕ ವಿಭಾಗದಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.
ತಿಮ್ಮೇಗೌಡ ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಪೊಲಸರು ತನಿಖೆ ನಡೆಸಲಿದ್ದಾರೆ. ಆದರೆ ಈ ಪ್ರಕರಣ ವಿಪಕ್ಷಗಳಿಗೆ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಪ್ರಬಲ ಅಸ್ತ್ರ ಸಿಕ್ಕಂತಾಗಲಿದೆ.