ಬೆಂಗಳೂರು: ಕೆಲವೊಂದು ಆಹಾರ ವಸ್ತುಗಳನ್ನು ಕನ್ನಡದಿಂದ ಸೀದಾ ಇಂಗ್ಲಿಷ್ ಗೆ ಭಾಷಾಂತರ ಮಾಡಲು ಹೋದರೆ ಏನೆಲ್ಲಾ ಎಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಒಂದು ವೈರಲ್ ಫೋಟೋವೇ ಸಾಕ್ಷಿ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ತಾವು ತಿಂದ ತಿಂಡಿಯ ಬಿಲ್ ನ್ನು ಪ್ರಕಟಿಸಿದ್ದು, ಈ ಬಿಲ್ ಭಾರೀ ವೈರಲ್ ಆಗಿದೆ. ಅದರಲ್ಲೂ ವಿಶೇಷವಾಗಿ ಅವರು ತಿಂದ ವಡಾ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ವಡೆಯ ಸ್ಪೆಷಾಲಿಟಿ ಏನು ಎಂಬ ಕುತೂಹಲವಿದೆಯೇ? ಹಾಗಿದ್ದರೆ ಈ ಸ್ಟೋರಿ ನೋಡಿ.
ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಕಾಮತ್ ರೆಸ್ಟೋರೆಂಟ್ ನಲ್ಲಿ ತಿಂಡಿ ತಿಂದ ವ್ಯಕ್ತಿಯೊಬ್ಬರು ಬಿಲ್ ನೋಡಿ ಅವಾಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಸಲಿಗೆ ಅವರು ವಡೆಗೆ ಆರ್ಡರ್ ಮಾಡಿದ್ದರು. ಸಾಮಾನ್ಯವಾಗಿ ವಡೆಯನ್ನು ಸಾಂಬಾರ್ ಅಥವಾ ಮೊಸರು ಇಲ್ಲವೇ ಚಟ್ನಿ ಅದ್ದಿ ಕೊಡುತ್ತಾರೆ.
ಅದೇ ರೀತಿ ಅವರೂ ವಡೆ ತಿಂದಿದ್ದಾರೆ. ಆದರೆ ಬಿಲ್ ನಲ್ಲಿ ಸ್ವಿಮ್ಮಿಂಗ್ ವಡಾ ಎಂದು ಒಕ್ಕಣೆ ಬರೆಯಲಾಗಿತ್ತು. ಇದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು ವೈರಲ್ ಆಗಿದೆ. ನೋಡಿದವರೆಲ್ಲಾ ಈ ವಡೆ ಸಾಂಬಾರ್ ನಲ್ಲಿ ಸ್ವಿಮ್ ಮಾಡುತ್ತದೆಯೇ ಮೊಸರಿನಲ್ಲಾ ಎಂದು ಕಿಚಾಯಿಸುತ್ತಿದ್ದಾರೆ.