ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರವಾಗಿ ಕೇಂದ್ರ ಸರ್ಕಾರ ₹3,454 ಕೋಟಿ ಪರಿಹಾರ ನೀಡಿದೆ. ಸರ್ಕಾರ ಸುಪ್ರೀಂ ಕೋರ್ಟ್ ಗೆ ವಚನ ನೀಡಿತ್ತು. ಅದನ್ನು ಪಾಲಿಸಲಿಕ್ಕಾಗಿ ಒಲ್ಲದ ಮನಸ್ಸಿನಿಂದ ಕೇಂದ್ರ ಸರ್ಕಾರ ಈ ಪರಿಹಾರ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಕಾಳಜಿಯಿಂದ ಈ ಬರ ಪರಿಹಾರ ನೀಡಿಲ್ಲ. ನಾವು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ನಮ್ಮಲ್ಲಿನ ಬರಸ್ಥಿತಿಯನ್ನು ಮನವರಿಕೆ ಮಾಡಿ ಕೊಟ್ಟಿದ್ದೆವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರವು ರಾಜಕೀಯ ದುರುದ್ದೇಶದಿಂದ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮನವರಿಕೆಯಾಗಿದೆ.
ನ್ಯಾಯಾಲಯ ವಿಚಾರಣೆ ವೇಳೆ ಚಾಟಿ ಬೀಸಿದ ನಂತರ ವಾರದ ಅವಧಿಯೊಳಗೆ ಬರ ಪರಿಹಾರ ನೀಡಲಾಗುವುದು ಎಂದು @narendramodi
ಸರ್ಕಾರ ಸುಪ್ರೀಂ ಕೋರ್ಟ್ ಗೆ ವಚನ ನೀಡಿತ್ತು. ಅದನ್ನು ಪಾಲಿಸಲಿಕ್ಕಾಗಿ ಒಲ್ಲದ ಮನಸ್ಸಿನಿಂದ ಈ ಪರಿಹಾರ ನೀಡಿದೆ ಎಂದಿದ್ದಾರೆ.
ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದ್ರೆ, ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ವಿಳಂಬ ಮಾಡಿತ್ತು. ಇದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಈ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಕೇಂದ್ರ ಸರ್ಕಾರ ಹಣ ಬಿಡುಗಡೆಯ ಬಗ್ಗೆ ಭರವಸೆ ನೀಡಿತ್ತು.