ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ

ಸೋಮವಾರ, 14 ಮಾರ್ಚ್ 2022 (09:11 IST)
ಮಂಡ್ಯ : ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಕಳೆದ ಎರಡು ದಿನಗಳಿಂದ ವೈರಮುಡಿ ಬ್ರಹ್ಮೋತ್ಸವ ಆರಂಭವಾಗಿದೆ.

ಕೊರೊನಾ ಕಾರಣಕ್ಕೆ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ಉತ್ಸವ ಈ ಬಾರಿ ವಿಜೃಂಭಣೆಯಿಂದ ನೆರವೇರಲಿದೆ. ಈ ಹಿನ್ನೆಲೆ ಇಡೀ ಮೇಲುಕೋಟೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳುಸುತ್ತಿದೆ.

ಭೂ ವೈಕುಂಠ ಎಂಬ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಹಲವು ಪುರಾಣ, ಇತಿಹಾಸಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರಮುಖ ಧಾರ್ಮಿಕ ಕ್ಷೇತ್ರ.
ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾದಿಂದಾಗಿ ವೈರಮುಡಿ ಜಾತ್ರಾಮಹೋತ್ಸವ ಭಕ್ತರಿಲ್ಲದೇ ಅತ್ಯಂತ ಸರಳವಾಗಿ ನೆರವೇರಿತ್ತು.

ಈ ಬಾರಿ ವಿಜೃಂಭಣೆಯಿಂದ ಉತ್ಸವ ಆಚರಿಸಲು ಮಂಡ್ಯ ಜಿಲ್ಲಾಡಳಿತ ನಿರ್ಧಾರ ಮಾಡಿದ್ದು, 9 ದಿನ ನಡೆಯುವ ಐತಿಹಾಸಿಕ ಬ್ರಹ್ಮೋತ್ಸವಕ್ಕೆ ಕಳೆದ ಎರಡು ದಿನಗಳ ಹಿಂದೆ ಬೆಳಗ್ಗೆ ಗರುಡ ಧ್ವಜಾರೋಹಣದೊಂದಿಗೆ ಚಾಲನೆ ದೊರಕಿದೆ.  

ಮೇಲುಕೋಟೆಗೆ ದೀಪಾಲಂಕಾರ ಮಾಡಲಾಗಿದ್ದು, ಇಡೀ ಮೇಲುಕೋಟೆಯಲ್ಲಿ ವೈಕುಂಠವೇ ಧರಗೆ ಇಳಿದಂತೆ ಕಾಣುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ಬೆಂಗಳೂರು, ಮೈಸೂರು, ಮಂಡ್ಯ, ಹಾಸನದಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶದಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದು, ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು 17ರಂದು ಮಹಾ ರಥೋತ್ಸವ ಹಾಗೂ 18ರಂದು ಕಲ್ಯಾಣಿಯಲ್ಲಿ ತೆಪ್ಪೋತ್ಸವ ಹಾಗೂ ಲೇಜರ್ ಶೋ ನಡೆಯಲಿದೆ.

ಒಟ್ಟಾರೆ ಈ ಬಾರಿಯ ಅದ್ದೂರಿ ಜಾತ್ರಾಮಹೋತ್ಸವಕ್ಕೆ10 ಲಕ್ಷ ಜನ ಸೇರುವ ನಿರೀಕ್ಷಿಸಲಾಗಿದ್ದು, ಭದ್ರತೆಗಾಗಿ 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ಜನರ ಆರೋಗ್ಯದ ದೃಷ್ಟಿಯಿಂದ 10 ಅಂಬ್ಯುಲೆನ್ಸ್ ಹಾಗೂ ವೈದ್ಯಕೀಯ ತಂಡ ನಿಯೋಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ