CET exam Brahmin student ಜನಿವಾರ ತೆಗೆಸಿದ ಘಟನೆ: ಕ್ಷಮೆ, ಅಧಿಕಾರಿ ಸಸ್ಪೆಂಡ್ ಓಕೆ, ವಿದ್ಯಾರ್ಥಿಯ ಭವಿಷ್ಯದ ಕತೆಯೇನು
ಬೆಂಗಳೂರು: ಸಿಇಟಿ ಪರೀಕ್ಷೆ ಬರೆಯಲು ಹಾಜರಾದ ವಿದ್ಯಾರ್ಥಿಗೆ ಜನಿವಾರ ತೆಗೆಯಲು ಒಪ್ಪಿಲ್ಲವೆಂದು ಪರೀಕ್ಷೆ ಬರೆಯಲು ಬಿಡದ ಘಟನೆ ಈಗ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸರ್ಕಾರದ ಸಚಿವರುಗಳೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಆದರೆ ಇದೆಲ್ಲಾ ಸರಿ, ಆ ವಿದ್ಯಾರ್ಥಿಯ ಭವಿಷ್ಯದ ಕತೆಯೇನು ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ.
ಶಿವಮೊಗ್ಗದ ವಿದ್ಯಾರ್ಥಿ ಅಂತೂ ಪರೀಕ್ಷೆ ಬರೆದಿದ್ದಾನೆ ಎನ್ನಲಾಗಿದೆ. ಆದರೆ ಬೀದರ್ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ. ಹೀಗಾಗಿ ಆತನ ಮುಂದಿನ ಭವಿಷ್ಯವೇನು ಎಂದು ಪ್ರಶ್ನೆ ಮೂಡಿದೆ. ಸಚಿವರೇನೋ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುತ್ತಾರೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ. ಪರೀಕ್ಷಾ ಪ್ರಾಧಿಕಾರವೂ ಆದ ಪ್ರಮಾದಕ್ಕೆ ಕ್ಷಮೆ ಕೇಳಿದೆ.
ಇದರ ಬೆನ್ನಲ್ಲೇ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ವಿದ್ಯಾರ್ಥಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಯು ಈಗಾಗಲೇ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವ ಶಾಸ್ತ್ರ ಪರೀಕ್ಷೆ ಬರೆದಿದ್ದಾನೆ. ಹೀಗಾಗಿ ಈ ಅಂಕಗಳ ಆಧಾರದಲ್ಲಿ ಪ್ರವೇಶ ಪಡೆಯುವ ಕೃಷಿ, ನರ್ಸಿಂಗ್, ಪಶು ವೈದ್ಯಕೀಯ ವಿಭಾಗದ ಪ್ರವೇಶಕ್ಕೆ ವಿದ್ಯಾರ್ಥಿ ಅರ್ಹನಾಗುತ್ತಾನೆ. ಒಂದು ವೇಳೆ ವಿದ್ಯಾರ್ಥಿ ಇಂಜಿನಿಯರಿಂಗ್ ಪ್ರವೇಶ ಪಡೆಯಲು ಬಯಸಿದರೆ ನಮ್ಮ ನಿಯಮಗಳಲ್ಲಿ ಅದಕ್ಕೆ ಅವಕಾಶವಿದೆಯೇ ಎಂದು ನೋಡುತ್ತೇವೆ. ಅವನದಲ್ಲದ ತಪ್ಪಿಗೆ ಅವನಿಗೆ ಶಿಕ್ಷೆ ಸಿಗುವಂತಾಗಬಾರದು. ಈಗಾಗಲೇ ಜಿಲ್ಲಾವಾರು ವರದಿ ತರಿಸುತ್ತಿದ್ದೇವೆ. ವರದಿ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.