ಬೆಂಗಳೂರು: ಸಿಇಟಿ ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳ ಜನಿವಾರ, ಕಾಶಿ ದಾರ ತೆಗೆಸಿದ ವಿಚಾರ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ಜನಿವಾರ ತೆಗೆಸಿದ್ದು ನಿಜವಾದ್ರೆ ಕ್ರಮ ಕೈಗೊಳ್ತೀವಿ ಎಂದಿದ್ದಾರೆ.
ಶಿವಮೊಗ್ಗ, ಬೀದರ್ ನ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಿಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಮತ್ತು ಕಾಶಿದಾರ ತೆಗೆಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಬ್ರಾಹ್ಮಣ ಸಂಘಟನೆಗಳು, ಹಿಂದೂ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ.
ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಚಿವರು, ಸಿಇಟಿಗೆ ಹಾಜರಾದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ನಿಜವೇ ಆದರೆ ಇದು ಅತಿರೇಕದ ವರ್ತನೆ. ಎಲ್ಲಾ ಜಾತಿ, ಧರ್ಮಗಳ ಆಚರಣೆಗೆ ಗೌರವ ಕೊಡಬೇಕು. ಇಂತಹ ಘಟನೆಗಳಿಗೆ ನಾನು ಪ್ರೋತ್ಸಾಹ ಕೊಡುವುದಿಲ್ಲ. ಇದು ನಿಜವಾಗಿದ್ದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇನ್ನು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.