ಬಿ.ಟಿ.ಎಂ ಲೇಔಟ್ 1ನೇ ಹಂತದಲ್ಲಿರುವ ಭವಿಷ್ಯ ಪಿಜಿಯಲ್ಲಿ ಸ್ನೇಹಿತ ರಾಜ್ಶಾ ಜೊತೆಗೆ ಮಕರಂದ್ ಎಂಬುವರು ವಾಸಿಸುತ್ತಿದ್ದರು. ಸೆ. 29ರ ಮಧ್ಯಾಹ್ನ 1 ಗಂಟೆಯಲ್ಲಿ ರೂಂಗೆ ಬಂದ ಅಪರಿಚಿತ ವ್ಯಕ್ತಿ ತಾನು ಹೊಸದಾಗಿ ಇದೇ ಪಿಜಿಗೆ ಸೇರಿದ್ದೇನೆ. ಮಾಲೀಕರು ಈ ರೂಂನಲ್ಲಿ ಇರಲು ಹೇಳಿದ್ದಾರೆ. ಕೀ ಕೊಟ್ಟರೆ ಲಗೇಜ್ ತರುತ್ತೇನೆ ಎಂದು ಹೇಳಿ ಮಕರಂದ್ ಬಳಿ ರೂಂನ ಕೀ ಪಡೆದಿದ್ದ. ಮಕರಂದ್ ಹಾಗೂ ರಾಜ್ಶಾ ಹೊರಹೋಗಿ ಸ್ವಲ್ಪ ಹೊತ್ತಿನ ಬಳಿಕ ಹಿಂದಿರುಗಿದಾಗ ರೂಂನಲ್ಲಿದ್ದ ಲ್ಯಾಪ್ಟಾಪ್ಗಳು ಇರಲಿಲ್ಲ. ಜತೆಗೆ ಅಪರಿಚಿತ ವ್ಯಕ್ತಿಯೂ ಇರಲಿಲ್ಲ. ಈ ಬಗ್ಗೆ ಪಿಜಿ ಮಾಲೀಕರನ್ನು ವಿಚಾರಿಸಿದಾಗ ಯಾರೂ ಹೊಸದಾಗಿ ಪಿಜಿಗೆ ಸೇರಿಲ್ಲ ಎಂದಿದ್ದಾರೆ. ಆಗ ಕಳ್ಳನ ಕರಾಮತ್ತು ಬೆಳಕಿಗೆ ಬಂದಿದೆ. ಬೆಳಗಾವಿ ಮೂಲದ ಮಕರಂದ್ ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.