ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾನು ಮತ್ತು ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅªರ ಉಪಸ್ಥಿತಿಯಲ್ಲಿ ಪರೀಕ್ಷಾರ್ಥಿಗಳ ಜೊತೆ ಸಭೆ ನಡೆಸಲಾಗಿದೆ ಎಂದು ವಿವರಿಸಿದರು. ಅವರಿಗೆ ಆಗಿರುವ ಅನ್ಯಾಯವನ್ನು ವಿವರವಾಗಿ ನಮಗೂ ತಿಳಿಸಿದ್ದಾರೆ ಎಂದು ಹೇಳಿದರು.
ಸರಕಾರ ಹೇಳುವುದೇ ಒಂದು ಮಾಡುವುದೇ ಒಂದು ಎಂದು ಆಕ್ಷೇಪಿಸಿದರು. ಮೇಲ್ಮನೆಯಲ್ಲಿ ಪ್ರಶ್ನಿಸಿದಾಗ ವಿದ್ಯಾರ್ಥಿಗಳ ಪರ ಇದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಕೋರ್ಟ್ ಆದೇಶ ನೋಡಿ ಮರುಪರೀಕ್ಷೆ ಮಾಡುವುದಾಗಿ ಹೇಳಿದ್ದರು. ಆದರೆ, ಕೋರ್ಟ್ ಆದೇಶ ಬಂದರೂ ಮೀನಾಮೇಷ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೊನ್ನೆ ನಡೆದ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳು ಸಕಾಲದಲ್ಲಿ ಸ್ಥಳ ಸೇರಿರಲಿಲ್ಲ. ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಪೊಲೀಸರು ಅವರನ್ನು ಹೊಡೆದು ಜೀಪಿನಲ್ಲಿ ತುಂಬಿಕೊಂಡು ಹೋದುದನ್ನು ಕಣ್ಣಾರೆ ನೋಡಿದ್ದೇವೆ ಎಂದು ತಿಳಿಸಿದರು. ಪ್ರಶ್ನಿಸಿದವರನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಸರಿಯೇ? ಪೊಲೀಸಿನವರ ಮೂಲಕ ಅವರನ್ನು ಹದ್ದುಬಸ್ತಿನಲ್ಲಿ ಇಡುವುದು ಸರಿಯೇ ಎಂದು ಕೇಳಿದರು.
ಸುಲಿಗೆ ಮಾಡುವ ನಿಪುಣ ನಿವೃತ್ತರಿಗೆ ಅವಕಾಶ...
ಇದು ಸುಲಿಗೆ ಸರಕಾರ. ಇದು ಸ್ಕೀಂ ಸರಕಾರವಲ್ಲ; ಸ್ಕ್ಯಾಮ್ ಸರಕಾರ. ಚೆನ್ನಾಗಿ ಸುಲಿಗೆ ಮಾಡಿ ತಲುಪಿಸುತ್ತಿದ್ದ ನಿವೃತ್ತ ಅಧಿಕಾರಿಗಳನ್ನು ನಿವೃತ್ತರಾದರೂ ಬಿಡುತ್ತಿಲ್ಲ; ಒಂದು ವರ್ಷ, ಎರಡು ವರ್ಷ, ಮೂರು ವರ್ಷ, ಕೆಲವರನ್ನು ಆರೇಳು ವರ್ಷ ಇಟ್ಟುಕೊಂಡಿದ್ದಾರೆ. ಹೊಸದಾಗಿ ಬಂದವರಿಗೆ ಸುಲಿಗೆಯ ಅನುಭವ ಇರದಿರುವುದೇ ಇದಕ್ಕೆ ಕಾರಣ ಎಂದು ವ್ಯಂಗ್ಯವಾಡಿದರು.