ಮನುಕುಲವನ್ನು ಕೊರೊನಾದಿಂದ ಚಾಮುಂಡೇಶ್ವರಿ ಕಾಪಾಡಲಿ: ಎಸ್.ಎಂ. ಕೃಷ್ಣ

ಗುರುವಾರ, 7 ಅಕ್ಟೋಬರ್ 2021 (10:30 IST)
ಮೈಸೂರು : 'ಮನುಕುಲಕ್ಕೆ ಬಂದ ದೊಡ್ಡ ಗಂಡಾತರವಾದ ಕೊರಾನಾದಿಂದ ಎಲ್ಲರನ್ನೂ ಚಾಮುಂಡೇಶ್ವರಿ ಪಾರು ಮಾಡಲಿ' ಎಂದು ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಕೋರಿದರು.

ಚಾಮುಂಡಿಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ಕಷ್ಟಕರವಾದ ಕಾಲದಲ್ಲಿ ಆರಂಭವಾದ ಉತ್ಸವ ಸುಲಲಿತವಾಗಿ ನಡೆಯಲಿ. ದೇವಿಯ ಅಗ್ರಪೂಜೆಯೊಂದಿಗೆ ಆರಂಭವಾದ ದಸರಾ ಎಲ್ಲರಿಗೂ ಒಳಿತು ಮಾಡಲಿ' ಎಂದರು.
'ಯಾವ ಜನ್ಮದ ಪುಣ್ಯವೋ ಏನೋ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತಂದೆಯೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿತ್ತು. ಬೊಮ್ಮಾಯಿ ಈಗ ಕೊರೊನಾ ಕಾಲದಲ್ಲಿ ಉತ್ಸವವನ್ನು ಶಿಸ್ತಾಗಿ ಆಯೋಜಿಸಿದ್ದಾರೆ' ಎಂದು ಶ್ಲಾಘಿಸಿದರು.
'ಹತ್ತು ಹನ್ನೆರಡು ವರ್ಷಗಳ ಬಾಲಕನಾಗಿದ್ದಾಗ ಮೈಸೂರಿಗೆ ನಮ್ಮಪ್ಪ ನನ್ನನ್ನು ಓದಲು ಕಳಿಸಿದರು. ಒಂಟಿಕೊಪ್ಪಲ್ ಮಿಡ್ಲ್ ಸ್ಕೂಲ್, ಮಹಾಜನ ಹೈಸ್ಕೂಲ್, ಯುವರಾಜ ಕಾಲೇಜು, ಮಹಾರಾಜ ಕಾಲೇಜಿನಲ್ಲಿ ಕಲಿತೆ. ಮೈಸೂರು ಜೊತೆಯಲ್ಲೇ ಬೆಳೆದೆ. ಪ್ರತಿ ದಿನ ಬೆಟ್ಟದ ಕಡೆ ನೋಡಿ ಕೈ ಮುಗಿದು ಶಾಲೆಗೆ ಹೋಗುತ್ತಿದ್ದೆ' ಎಂದು ಸ್ಮರಿಸಿದರು.
'ಅಪ್ಪ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಈ ಪಿಡುಗುಗಳಿರಲಿಲ್ಲ. ಮಹಾ ಸಡಗರದಿಂದ ದಸರಾ ನಡೆಯುತ್ತಿತ್ತು. ಜನ ವಿದೇಶಗಳಿಂದಲೂ ಬರುತ್ತಿದ್ದರು.
ಜಗನ್ಮೋಹನ ಅರಮನೆಯಲ್ಲಿ ಪ್ರಜಾಪ್ರತಿನಿಧಿ ಸಭೆ ನಡೆಯುತ್ತಿತ್ತು. ಮರಿಮಲ್ಲಪ್ಪ ಹೈಸ್ಕೂಲಿನಲ್ಲಿ ಪ್ರತಿನಿಧಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ಡಿ.ದೇವೇಂದ್ರಪ್ಪ, ಪಿಟೀಲು ಚೌಡಯ್ಯ ಪ್ರತಿ ರಾತ್ರಿ ಸಂಗೀತ ಕಚೇರಿಗಳನ್ನು ಏರ್ಪಡಿಸುತ್ತಿದ್ದರು' ಎಂದು ಸ್ಮರಿಸಿದರು.
'ದಸರಾ ಕುಸ್ತಿ ಪ್ರದರ್ಶನವನ್ನು ಸಾಹುಕಾರ್ ಚನ್ನಯ್ಯ ಏರ್ಪಡಿಸುತ್ತಿದ್ದರು. ಸಾವಿರಾರು ಜನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂಥ ರೋಚಕ, ಪುಳಕಿತಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದವು' ಎಂದು ಹೇಳಿದರು.
'ರಾಮಕೃಷ್ಣ ಆಶ್ರಮದಿಂದ ಬೆಟ್ಟಕ್ಕೆ ಪ್ರತಿ ತಿಂಗಳೂ ನಡೆದು ಹೋಗುತ್ತಿದ್ದೆವು. ಆಗೆಲ್ಲ, ಮತ್ತೆ ಈ ಘಳಿಗೆ ಬರುವುದೇ ಎನ್ನಿಸುತ್ತಿತ್ತು. ವಿದ್ಯಾರ್ಥಿಯಾಗಿದ್ದಾಗಲೇ ದಸರೆ ನೋಡುತ್ತಿದ್ದೆ. ಮಂಡ್ಯ ಬಹಳ ವರ್ಷಗಳ ಕಾಲ ಮೈಸೂರಿನ ತಾಲ್ಲೂಕಾಗಿತ್ತು. 75 ವರ್ಷಗಳ ಹಿಂದೆ ಪ್ರತ್ಯೇಕ ಜಿಲ್ಲೆಯಾಯಿತು. ಅಲ್ಲಿಂದಲೂ ಜನ ದಸರೆಗೆ ಬರುತ್ತಿದ್ದರು' ಎಂದರು.
''ಯದುಕುಲದ ಅರಸರು ಈ ಹಬ್ಬವನ್ನು ನಾಡ ಹಬ್ಬವನ್ನಾಗಿ ಪರಿವರ್ತಿಸಲು ಶ್ರಮಪಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಸೇರಿದಂತೆ ಹಲವು ಅರಸರು, ಸರ್.ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರಂಥ ದಿವಾನರು ದಸರಾಗೆ ವಿಶೇಷ ಮೆರುಗು ತಂದುಕೊಟ್ಟರು' ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ