ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಈಗಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಸರಕಾರದ ತೀರ್ಥಯಾತ್ರೆಗಳ ಪುನಶ್ಚೇತನ ಮತ್ತು ಆಧ್ಯಾತ್ಮ, ಪಾರಂಪರಿಕ ವರ್ಧನೆಯ ಯೋಜನೆ (ಪ್ರಸಾದ್) ಅಡಿ ₹ 100 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರದಿಂದ ಅನುದಾನ ಲಭಿಸುವ ಭರವಸೆ ಸಿಕ್ಕಿದೆ.
ತಜ್ಞರ ತಂಡದಿಂದ ಹೊಸವಿನ್ಯಾಸ.
ಎರಡು ತಿಂಗಳ ಹಿಂದೆ ವಾಸ್ತುಶಿಲ್ಪಿ ತಜ್ಞರ ತಂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದೆ. ಹೊಸ ಯೋಜನೆಯ ವಿನ್ಯಾಸ ಮಾಡಿದೆ. ದೇವಸ್ಥಾನದ ಎದುರಿರುವ ಭಜನೆ ಮಂಟಪ, ದೇವಸ್ಥಾನದ ಎಡಬದಿಯಲ್ಲಿ ಪ್ರಾಕಾರ ಆವರಣ ನಿರ್ಮಾಣ, ಮಹಾಬಲೇಶ್ವರ ದೇವಸ್ಥಾನ ಪುನರುತ್ಥಾನ, ನಾರಾಯಣ ದೇವಸ್ಥಾನಕ್ಕೆ ಹೊಸ ರೂಪ ಸಿಗಲಿದೆ. ದೇವಳದ ಬಳಿ ಇರುವ ಅಂಗಡಿ ಮುಂಗಟ್ಟುಗಳನ್ನು ತೆರೆವುಗೊಳಿಸಿ, ಅವರಿಗೆ ಹೈಟೆಕ್ ಮಾದರಿಯ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ.
ಹಂಪಿ ಶೈಲಿಯ ರಾಜಗೋಪುರ
ಮಹಿಷಾಸುರ ಪ್ರತಿಮೆ ಬಳಿ ವಿಜಯನಗರ ಮಾದರಿಯಲ್ಲಿ ಬೃಹತ್ ರಾಜಗೋಪುರ ನಿರ್ಮಾಣವಾಗಲಿದೆ. ಜೊತೆಗೆ ಚಾಮುಂಡೇಶ್ವರಿ ದೇಗುಲಕ್ಕೆ ಹೋಗುವ ಮಾರ್ಗವನ್ನು ವಿಶೇಷವಾಗಿ ನಿರ್ಮಿಸಲಾಗುತ್ತದೆ. ಪಾದಚರಿಗಳ ವಿಶೇಷ ಪಥ ನಿರ್ಮಾಣದೊಂದಿಗೆ ದರ್ಶನ ಪಡೆಯಲು ಅನುಕೂಲವಾಗುವಂತೆ ಮಾರ್ಗ ವಿನ್ಯಾಸಗೊಳ್ಳಲಿದೆ. ನೂರಾರು ವರ್ಷಗಳ ಇತಿಹಾಸವಿರುವ ಬೃಹತ್ ನಂದಿ ವಿಗ್ರಹವನ್ನು ನೋಡಲು ನಂದಿ ಸುತ್ತಲೂ ವೀಕ್ಷಣಾ ತಾಣ ರಚನೆ ಹೊಸ ಯೋಜನೆಯಲ್ಲಿದೆ. ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ತೆರಳುವ ಮಾರ್ಗವನ್ನೂ ಹೊಸದಾಗಿ ವಿನ್ಯಾಸಗೊಳಿಸಿದ್ದು, ದೇವಸ್ಥಾನದ ಸಮೀಪದ ದೇವಿಕೆರೆಯ ಅಭಿವೃದ್ಧಿಗೂ ಯೋಜನೆ ಸಿದ್ಧಪಡಿಸಲಾಗಿದೆ.
ಚಾಮುಂಡಿಬೆಟ್ಟದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವ ಮೂಲಕ ಇಡೀ ಬೆಟ್ಟದ ಚಿತ್ರಣ ಹಾಗೂ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ತಿಳಿಸಿಕೊಡಲಾಗುತ್ತದೆ. ಬೆಟ್ಟಕ್ಕೆ ಸಾರ್ವಜನಿಕರನ್ನು ಕರೆದೊಯ್ಯಲು ಎಲೆಕ್ಟ್ರಿಕ್ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತದೆ. ಇಡೀ ಭಾರತದಲ್ಲಿಯೇ ಶೂನ್ಯ ತ್ಯಾಜ್ಯ ವಾತಾವರಣ ಹಾಗೂ ಝೀರೋ ಕಾರ್ಬನ್ ಎಮಿಷನ್ ವಾತಾವರಣದ ಕ್ಯಾಂಪಸ್ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ.