ಆಟೋಗಳಿಗೆ ಚಾರ್ಜಿಂಗ್ ಬ್ಯಾಟರಿ; ಡಿಸೇಲ್, ಗ್ಯಾಸ್'ಗೆ ಹೇಳಿ ಗುಡ್ ಬೈ

ಶನಿವಾರ, 5 ನವೆಂಬರ್ 2016 (10:13 IST)
ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೊಲ್, ಡಿಸೆಲ್ ಏರುತ್ತಿರುವ ಪರಿಣಾಮ ಶ್ರೀಸಾಮಾನ್ಯನ ಬದುಕು ಮೂರಾಬಟ್ಟೆಯಾಗುತ್ತಿದೆ. ಒಂದಿಷ್ಟು ದೂರ ಹೋಗಬೇಕೆಂದರೆ ಆಟೋಗಳಿಗೆ ಮೂವತ್ತು, ಐವತ್ತು ನೀಡಬೇಕು. ಅದರ ಬದಲು ಹತ್ತು, ಹದಿನೈದು ರೂ.ಕೊಟ್ಟು ಪ್ರಯಾಣಿಸುವಂತಾದರೆ...
 
ಹೌದು, ಇಂತಹ ಅವಕಾಶವೊಂದು ಇದೇ ಜನವರಿಯಿಂದ ರಾಜಧಾನಿ ಆಟೋ ಪ್ರಯಾಣಿಕರಿಗೆ ದೊರಕಲಿದೆ. ವೋಲ್ಟಾ ಆಟೋಮೆಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಪಾನ್‍ನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಬ್ಯಾಟರಿ ಚಾಲಿತ ವಾಹನಗಳನ್ನು ನಿಯಂತ್ರಿಸಲು ಮುಂದಾಗಿದೆ. ಈ ಸಂಸ್ಥೆ ಈಗಾಗಲೇ ಬ್ಯಾಟರಿ ಚಾಲಿತ ಆಟೋರಿಕ್ಷಾ ತಯಾರಿಕೆಗೆ ಮುಂದಾಗಿದ್ದು ಹಳೆಯ ಮಾತು. ಇದರ ಬ್ಯಾಟರಿ ಪರಿಸರಕ್ಕೆ ಪೂರಕವಾಗಿರುವುದಲ್ಲದೆ, ಸುಮಾರು 5 ರಿಂದ 6 ಗಂಟೆಗಳಷ್ಟು ಕಾಲ ಬ್ಯಾಟರಿ ಚಾರ್ಜ್ ಮಾಡಿದರೆ ನೂರು ಕಿಲೋ ಮೀಟರ್ ದೂರ ಓಡಿಸಬಹುದುದಾಗಿದೆ. ಇದರ ಬೆಲೆ ಸುಮಾರು 19 ಸಾವಿರಗಳಷ್ಟಾಗಲಿದೆ ಎಂದು ಸಂಸ್ಥೆಯ ಸಿಇಒ ರಾಹುಲ್ ಶ್ರೀನಿವಾಸ ತಿಳಿಸಿದ್ದಾರೆ.
 
ಈ ಚಾರ್ಜಿಂಗ್ ಬ್ಯಾಟರಿಗಳನ್ನು ಔಟ್‍ ಲೆಟ್‍ಗಳಲ್ಲಿ ಚಾರ್ಜ್ ಮಾಡಲು ವ್ಯವಸ್ಥೆ ಮಾಡುವ ಅಗತ್ಯವಿದ್ದು, ಕನಿಷ್ಟ ಮೂರು ಜನರನ್ನು ಹೊಂದಿರುವ ಆಟೋಗಳನ್ನು ಎಳೆಯುವ ಸಾಮರ್ಥ್ಯ ಇದಕ್ಕಿದೆ. ಬ್ಯಾಟರಿ ಬಳಕೆ ಐದು ವರ್ಷವಾಗಿದ್ದು, ಇದೇ ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಸಂಬಂಧಿಸಿ ಕೇಂದ್ರ ಸರಕಾರದೊಂದಿಗೆ ಮಾತುಕತೆಯೂ ನಡೆಯಲಿದೆ. ಇನ್ನೂ ಒಂದು ವಿಶೇಷವೆಂದರೆ  ಕಾರು ಹಾಗೂ ದ್ವಿಚಕ್ರ ವಾಹನಗಳಿಗೂ ಈ ಮಾದರಿಯ ಬ್ಯಾಟರಿ ಬಳಸಿ ಚಾಲನೆ ಮಾಡುವ ಬಗ್ಗೆ ಚಿಂತನೆ ಸಂಸ್ಥೆ ಹೊಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ