ಶಾಲೆಗಳಲ್ಲಿ ಪ್ರಾರ್ಥನೆ ಬೇಕಾಗಿಲ್ಲ: ಚೇತನ್ ಅಹಿಂಸಾ

Krishnaveni K

ಮಂಗಳವಾರ, 20 ಫೆಬ್ರವರಿ 2024 (09:42 IST)
Photo Courtesy: facebook
ಬೆಂಗಳೂರು: ಶಾಲೆಗಳಲ್ಲಿ ಪ್ರಾರ್ಥನೆ ಮಾಡಬೇಕಾಗಿಲ್ಲ, ಮೂಢನಂಬಿಕೆಗಳೇನಿದ್ದರೂ ನಿಮ್ಮ ಮನೆಯಲ್ಲಿಟ್ಟುಕೊಳ‍್ಳಿ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.

ನಿನ್ನೆಯಷ್ಟೇ ಸಮಾಜ ಕಲ್ಯಾಣ ಇಲಾಖೆ ವಸತಿಶಾಲೆಗಳ ಗೋಡೆ ಮೇಲೆ ಇಷ್ಟು ವರ್ಷ ಇದ್ದ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎನ್ನುವ ಕುವೆಂಪು ವಾಕ್ಯವನ್ನು ಬದಲಾಯಿಸಿ ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾಯಿಸಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಚೇತನ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಚೇತನ್, ಇದೀಗ ಶಾಲೆಗಳಲ್ಲಿ ದೇವರ ಪೂಜೆ ಬೇಡ ಎಂಬ ಹೇಳಿಕೆ ನೀಡಿದ್ದಾರೆ. ಶಾಲೆಗಳಲ್ಲಿ ದೇವರ ಪೂಜೆ ಬೇಕಾಗಿಲ್ಲ. ಪೂಜೆ ಪುನಸ್ಕಾರವೆಂಬ ಮೌಢ್ಯಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ. ಶಾಲೆಗಳಲ್ಲಿ ಮುಖ್ಯವಾಗಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವೈಜ್ಞಾನಿಕತೆಯಿಂದಲೇ ಸತ್ಯ,  ವೈಜ್ಞಾನಿಕವೇ ಸತ್ಯ ಎಂದು ಹೇಳಿದ್ದಾರೆ.

ಚೇತನ್ ಹೇಳಿಕೆ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಕುವೆಂಪು ವಾಕ್ಯ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಚೇತನ್ ಈ ರೀತಿ ಹೇಳಿಕೆ ನೀಡಿದ್ದಾರೆ. ಒಂದೆಡೆ ಕುವೆಂಪು ವಾಕ್ಯ ಬದಲಾವಣೆ ವಿರೋಧಿಸಿ ವಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. ಆದರೆ ಕುವೆಂಪು ವಾಕ್ಯವನ್ನು ನಾವು ಬದಲಿಸಿಲ್ಲ ಎಂದು ಸರ್ಕಾರ ಸಮರ್ಥಿಸಿದೆ. ಯಾರೋ ಒಬ್ಬರು ಅಧಿಕಾರಿಗಳು ಮಾಡಿದ ಮೌಖಿಕ ಆದೇಶದ ಪ್ರಕಾರ ಈ ರೀತಿ ಬದಲಾಯಿಸಲಾಗಿತ್ತು ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ