ಶ್ರೀಲಂಕಾದಲ್ಲಿ‌ಆಹಾರವಿಲ್ಲದೆ ಮಕ್ಕಳ‌ ಪರದಾಟ

ಭಾನುವಾರ, 28 ಆಗಸ್ಟ್ 2022 (17:39 IST)
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಮಕ್ಕಳು ಬರಿಹೊಟ್ಟೆಯಲ್ಲಿ ರಾತ್ರಿ ಮಲಗುತ್ತಿದ್ದಾರೆ ಎಂದು ಹೇಳಿರುವ ವಿಶ್ವಸಂಸ್ಥೆಯು ಮುಂಬರುವ ದಿನಗಳಲ್ಲಿ ದಕ್ಷಿಣ ಏಷ್ಯಾದ ಬೇರೆ ರಾಷ್ಟ್ರಗಳಲ್ಲೂ ಸಹ ಇದೇ ಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದೆ. ರಫ್ತುಗಳನ್ನು ಖರೀದಿಸಲು ತೀವ್ರ ಸ್ವರೂಪದ ವಿದೇಶಿ ವಿನಿಮಯದ ಕೊರತೆಯನ್ನು ಶ್ರೀಲಂಕಾ ಸರ್ಕಾರ ಎದುರಿಸುತ್ತಿರುವುದರಿಂದ ಅಹಾರ ಸರಬರಾಜು, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಅಭಾವ ಉಂಟಾಗಿದೆ. ದ್ವೀಪರಾಷ್ಟ್ರದಲ್ಲಿ ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆ, ಖಾದ್ಯ ತೈಲ ಮತ್ತು ಇತರ ಸರಕುಗಳ ಬೆಲೆ ಗಗನಕ್ಕೆ ಮುಟ್ಟಿರುವ ಕಾರಣ ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳು ಹಸಿದ ಹೊಟ್ಟೆಯಲ್ಲಿ ಮಲಗುತ್ತಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ಅಂಗವಾಗಿರುವ ಯುನಿಸೆಫ್ ದಕ್ಷಿಣ ಏಷ್ಯಾ ನಿರ್ದೇಶಕ ಲರಿಯಾ ಅಡ್ಜೀ ಹೇಳಿದ್ದಾರೆ. ‘ಮಕ್ಕಳು ಬರಿ ಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಬೆಳಗ್ಗೆ ಊಟ ಸಿಕ್ಕೀತೋ ಅಥವಾ ತಮ್ಮಲ್ಲಿಗೆ ಅದು ಎಲ್ಲಿಂದ ಬಂದೀತು ಎಂಬ ಯೋಚನೆಯಲ್ಲೇ ಅವರು ಹಾಸಿಗೆಗೆ ಹೋಗುತ್ತಿದ್ದಾರೆ,’ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ. ಕಳೆದ ಏಪ್ರಿಲ್​​​ನಲ್ಲಿ ₹51 ಬಿಲಿಯನ್ ವಿದೇಶಿ ಸಾಲ ತೀರಿಸಬೇಕಿದ್ದ ಶ್ರೀಲಂಕಾ ಕೈ ಚೆಲ್ಲಿಬಿಟ್ಟಿತ್ತು. ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡಲು ಅಲ್ಲಿನ ಸರ್ಕಾರ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದೆ.
 
ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದಿಂದ ಇಂಧನದ ಬೆಲೆ ಅಂಕೆ ಮೀರಿದ್ದು, ಅದು ನೆರೆಹೊರೆಯ ರಾಷ್ಟ್ರಗಳ ಮೇಲೆ ಕೂಡ ಪರಿಣಾಮ ಬೀರುತ್ತಿದೆ ಎಂದು ಹೇಳಿರುವ ಲರಿಯಾ ಅಡ್ಜೀ ದಕ್ಷಿಣ ಏಷ್ಯಾ ಪ್ರಾಂತ್ಯದ ಇತರ ದೇಶಗಳಲ್ಲೂ ಅಹಾರ ಕೊರತೆಯ ಸಮಸ್ಯೆ ಎದುರಾಗಬಹುದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ