ಸಿಐಡಿ ಅಧಿಕಾರಿಗಳಿಂದ ತನಿಖೆಯಾಗಿಲ್ಲ, ಸಾಕ್ಷ್ಯ ನಾಶವಾಗಿದೆ: ಗಣಪತಿ ಸಹೋದರ ಆಕ್ರೋಶ

ಶುಕ್ರವಾರ, 6 ಜನವರಿ 2017 (14:22 IST)
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೀಡಿರುವ ವರದಿ ಬೋಗಸ್. ಸಿಐಡಿ ಅಧಿಕಾರಿಗಳು ತನಿಖೆಯೇ ನಡೆಸಿಲ್ಲ, ಬದಲಿಗೆ ಸಾಕ್ಷ್ಯ ನಾಶಪಡಿಸಿದ್ದಾರೆ ಎಂದು ಗಣಪತಿ ಸಹೋದರ ಮಾಚಯ್ಯ ಆರೋಪಿಸಿದ್ದಾರೆ.
ಸೋಮವಾರಪೇಟೆಯ ರಂಗಸಮುದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೀಡಿರುವ ವರದಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳನ್ನು ನಿರಪರಾಧಿಗಳೆಂದು  ತೋರಿಸಲಾಗಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು.
 
ಪ್ರಕರಣದ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿರುವುದು ಸರಿಯಾಗಿದೆ. ಸುಪ್ರೀಕೋರ್ಟ‌ನಲ್ಲಿ ನಮಗೆ ನ್ಯಾಯದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ವೈದ್ಯರು ನೀಡಿದ ವರದಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೀಗಾಗಿ ನಾವು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದೇವೆ. ಅಣ್ಣನ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಗಣಪತಿ ಸಹೋದರ ಮಾಚಯ್ಯ ಸ್ಪಷ್ಟಪಡಿಸಿದ್ದಾರೆ.
 
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರು ಜುಲೈ 7ರ ಸಾಯಂಕಾಲ ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಪ್ರೊನಬ್ ಮೊಹಾಂತಿ ಮತ್ತು ಎಂ.ಎಂ.ಪ್ರಸಾದ್ ಅವರು ತನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆನಾದ್ರೂ ಆದ್ರೆ ಈ ಮೂವರೇ ಕಾರಣ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ