ಪ್ರಧಾನಿ ಮೋದಿ ಈಗಲ್ಲ ಆಗಲೇ ಮಣಿಪುರಕ್ಕೆ ಭೇಟಿ ಕೊಡಬೇಕಿತ್ತು: ಸಿದ್ದರಾಮಯ್ಯ ಆಕ್ಷೇಪ

Krishnaveni K

ಶನಿವಾರ, 13 ಸೆಪ್ಟಂಬರ್ 2025 (14:27 IST)
ಮೈಸೂರು: ಹಿಂಸಾಚಾರದಿಂದ ತತ್ತರಿಸಿದ್ದ ಮಣಿಪುರಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ನಡೆಗೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋದಿ ಈಗಲ್ಲ, ಅಂದೇ ಅಲ್ಲಿಗೆ ಭೇಟಿ ಕೊಡಬೇಕಿತ್ತು ಎಂದಿದ್ದಾರೆ.

ಮಣಿಪುರ ಈಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ಸಂದರ್ಭದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

‘ಗಲಭೆ ಆರಂಭವಾಗಿ ಮೂರು ವರ್ಷಗಳ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಮಣಿಪುರದಲ್ಲಿ ಗಲಭೆ ನಡೆಯುವ ಸಂದರ್ಭದಲ್ಲಿ ಪ್ರಧಾನಿಗಳು ಭೇಟಿನೀಡಿ, ಜನರ ಕಷ್ಟ ಆಲಿಸಬೇಕಿತ್ತು. ಪರಿಸ್ಥಿತಿ ಸುಧಾರಿಸಿದ ಮೇಲೆ ಭೇಟಿ ನೀಡುತ್ತಿದ್ದಾರೆ. ವಿರೋಧಪಕ್ಷದವರ ಒತ್ತಡದಿಂದ ಈಗ ಮಣಿಪುರಕ್ಕೆ ಹೋಗಿದ್ದಾರೆ.

ಬಿಜೆಪಿ ನಾಯಕರಾದ ಸಿ.ಟಿ ರವಿ, ಬಸನಗೌಡ ಯತ್ನಾಳ್ ಅವರು ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ ಕಾರಣಕ್ಕಾಗಿ ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ಬಿಜೆಪಿಯವರು ಪ್ರಚೋದನಾಕಾರಿಯಾದ ಭಾಷಣ ಮಾಡಿದರೆ ಸರ್ಕಾರ ಏನು ಮಾಡಬೇಕು? ಕೈಕಟ್ಟಿ ಕೂರಲು ಆಗುತ್ತದೆಯಾ? ಸಮಾಜದ ಶಾಂತಿ ನೆಮ್ಮದಿಯನ್ನು ಕಾಪಾಡುವುದು ಅತ್ಯಂತ ಅವಶ್ಯಕ. ಅದಕ್ಕಾಗಿ ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದು ರಾಜಕಾರಣವಲ್ಲ. ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ, ಮಾಡುವುದು ಇಲ್ಲ. ನಾನೂ ಕೂಡ ಒಬ್ಬ ಹಿಂದೂ. ನನ್ನ ಹೆಸರಿನಲ್ಲಿಯೇ ಈಶ್ವರ ಮತ್ತು ರಾಮ ಎರಡೂ ದೇವರ ಹೆಸರಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ