ಮಸೀದಿ ಮುಂದೆ ಗಣೇಶ ಮೆರವಣಿಗೆ ಮೇಲೆ ದಾಳಿ: ನಾಗಮಂಗಲದಲ್ಲಿ ಸೆಕ್ಷನ್ 144 ಜಾರಿ

Krishnaveni K

ಗುರುವಾರ, 12 ಸೆಪ್ಟಂಬರ್ 2024 (10:07 IST)
ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆಗೆ ಮುನ್ನ ಮಂಡ್ಯದ ನಾಗಮಂಗಲದಲ್ಲಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಅನ್ಯ ಕೋಮಿನ ಯುವಕರಿಂದ ದಾಳಿಯಾಗಿದ್ದು ಸೆಕ್ಷನ್144 ಜಾರಿ ಮಾಡಲಾಗಿದೆ.

ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಕಳೆದ 5 ದಿನಗಳಿಂದ ಗಣೇಶನ ಮೂರ್ತಿ ಇಡಲಾಗಿತ್ತು. ನಿನ್ನೆ ಮೆರವಣಿಗೆ ಮೂಲಕ ವಿಸರ್ಜನೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಪಟಾಕಿ ಸಿಡಿಸಿ, ತಮಟೆ, ಡಿಜೆ ಸೌಂಡ್ ನೊಂದಿಗೆ ಹಿಂದೂಗಳು ಗಣೇಶ ವಿಸರ್ಜನೆಗೆ ಅದ್ಧೂರಿ ಮೆರವಣಿಗೆ ಸಾಗುತ್ತಿತ್ತು.

ಮಂಡ್ಯ ಸರ್ಕಲ್ ಮಾರ್ಗವಾಗಿ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ರಸ್ತೆಯ ಮುಂಭಾಗ ಸಾಗುತ್ತಿದ್ದಾಗ ಅನ್ಯ ಕೋಮಿನ ಯುವಕರು ದಾಳಿ ನಡೆಸಿದ್ದಾರೆ. ಮಸೀದಿ ಮುಂದೆ ಡೊಳ್ಳು,ತಮಟೆ ಬಾರಿಸದಂತೆ ಕ್ಯಾತೆ ತೆಗೆದಿದ್ದಾರೆ. ಆದರೆ ಅವರನ್ನು ಕ್ಯಾರೇ ಮಾಡದೇ ಗಣೇಶನ ಮೆರವಣಿಗೆ ಯಥಾವತ್ತು ಮುಂದೆ ಸಾಗಿದೆ.

ಮಸೀದಿಯಿಂದ ಸ್ವಲ್ಪ ದೂರ ಗಣೇಶನ ಮೆರವಣಿಗೆ ಬರುತ್ತಿದ್ದಂತೇ ಕಟ್ಟಡದ ಮೇಲೆ ನಿಂತು ಕಲ್ಲು ತೂರಾಟ ನಡೆಸಿ ಅನ್ಯಕೋಮಿನ ಯುವಕರು ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಗುಂಪಿನ ನಡುವೆ ಜೋರಾಗಿ ಹಲ್ಲೆ, ವಾಗ್ವಾದ ನಡೆದಿದೆ. ಕೆಲವು ಸಮಯದ ನಂತರ ಮಂಡ್ಯ ಸರ್ಕಲ್ ನಲ್ಲಿ ಅನ್ಯ ಕೋಮಿನ ಯುವಕರು ಸಿಕ್ಕ ಸಿಕ್ಕ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ, ಪೆಟ್ರೋಲ್ ಬಾಂಬ್ ಹಾಕಿ ದಾಳಿ ಮಾಡಿದ್ದಾರೆ. ಅಲ್ಲದೆ ಮಾರಕಾಸ್ತ್ರ ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಇದೀಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ