ಇಂದು ಮಂಡ್ಯಕ್ಕೆ ಎಚ್ ಡಿ ಕುಮಾರಸ್ವಾಮಿ, ನೂತನ ಸಂಸದರ ಕಚೇರಿ ಉದ್ಘಾಟನೆ
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಕುಮಾರಸ್ವಾಮಿ ಭರ್ಜರಿ ಅಂತರದಿಂದ ಜಯಗಳಿಸಿದ್ದರು. ಬಳಿಕ ಇದೀಗ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ರಚನೆಯಾಗಿರುವ ಎನ್ ಡಿಎ ಸರ್ಕಾರದಲ್ಲಿ ಕುಮಾರಸ್ವಾಮಿ ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.
ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅವರು ನಿನ್ನೆ ರಾಜ್ಯಕ್ಕೆ ಬಂದಿದ್ದರು. ನಿನ್ನೆ ಬೆಂಗಳೂರಿಗೆ ಬಂದಿದ್ದ ಕುಮಾರಸ್ವಾಮಿ ಇಂದು ತಮ್ಮ ಸ್ವಕ್ಷೇತ್ರ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯದಲ್ಲಿ ಇಂದು ನೂತನ ಸಂಸದರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ.
ಬಳಿಕ ಜನರೊಂದಿಗೆ ಬೆರೆತು ಅಭಿನಂದನೆ ಸ್ವೀಕರಿಸಲಿದ್ದಾರೆ. ಮಂಡ್ಯದ ಜನ ಈ ಬಾರಿ ಕುಮಾರಸ್ವಾಮಿಗೆ ಭಾರೀ ಅಂತರದ ಗೆಲುವು ನೀಡಿದ್ದರು. ಜೊತೆಗೆ ಕೇಂದ್ರ ಸಚಿವರಾಗಿ ಮಂಡ್ಯಕ್ಕೆ ಆಗಮಿಸುತ್ತಿರುವ ಕಾರಣಕ್ಕೆ ಕುಮಾರಸ್ವಾಮಿಯವರ ಈ ಭೇಟಿ ವಿಶೇಷವಾಗಿದೆ.