ಕೆ.ಜೆ.ಜಾರ್ಜ್‌ಗೆ ಕ್ಲೀನ್ ಚಿಟ್ ನೀಡಿ, ಡಿವೈಎಸ್‌ಪಿ ಕುಟುಂಬಕ್ಕೆ ಅನ್ಯಾಯವೆಸಗಲಾಗಿದೆ: ಶೆಟ್ಟರ್

ಸೋಮವಾರ, 19 ಸೆಪ್ಟಂಬರ್ 2016 (15:24 IST)
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ತನಿಖೆ ನಡೆಸಿದ ಸಿಐಡಿ ತಂಡ ಆರೋಪಿಗಳಾದ ಮಾಜಿ ಸಚಿವ ಜಾರ್ಜ್, ಇಬ್ಬರು ಐಪಿಎಸ್ ಅಧಿಕಾರಿಗಳ ಪರ ಬಿ ರಿಪೋರ್ಟ್ ಸಲ್ಲಿಸಿರುವುದು ಮೃತ ಗಣಪತಿ ಕುಟುಂಬಕ್ಕೆ ಅನ್ಯಾಯವೆಸಗಿದಂತಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
 
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ಅಂದರೆ ಕಾಂಗ್ರೆಸ್ ಇನ್‌ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್ ಎಂದಂತೆ. ಸಿಐಡಿ ತಂಡ ಗಡುವಿಗೆ ಮುಂಚೆಯೇ ವರದಿ ಸಲ್ಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಜಾರ್ಜ್ ಅವರನ್ನು ಮತ್ತೆ ಬೇಗ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
 
ಹಿರಿಯ ಸಾಹಿತಿ, ಸಂಶೋಧಕ ಎಂ.ಎಂ.ಕಲಬುರಗಿ, ಕ್ರಿಕೆಟ್ ಬೆಟ್ಟಿಂಗ್ ಮತ್ತು ದಿವಂಗತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ್ ಬಂಡೆ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲವಾಗಿರುವ ಸಿಐಡಿ, ಜಾರ್ಜ್ ಆರೋಪಿಯಾಗಿರುವ ಪ್ರಕರಣದಲ್ಲಿ ಕೇವಲ 45 ದಿನಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.   
 
ಸಿಐಡಿ ತಂಡ ಕ್ಲೀನ್ ಚಿಟ್ ನೀಡಿದ ಮಾತ್ರಕ್ಕೆ ಆರೋಪಿಗಳು ಆರೋಪ ಮುಕ್ತ ಎಂದು ಭಾವಿಸಬೇಕಾಗಿಲ್ಲ. ನಿವೃತ್ತ ನ್ಯಾಯಮೂರ್ತಿ ಕೇಶವನಾರಾಯಣ್ ನೇತೃತ್ವದ ನ್ಯಾಯಾಂಗ ಆಯೋಗ ಪ್ರಕರಣದ ಬಗ್ಗೆ ತನಿಖೆ ಆರಂಭಿಸಬೇಕಾಗಿದೆ. ಆದರೆ, ಸರಕಾರ ಇಲ್ಲಿಯವರೆಗೆ ನ್ಯಾಯಮೂರ್ತಿಗೆ ಕಚೇರಿ ಮತ್ತು ಇತರ ದಾಖಲೆಗಳನ್ನು ಹಸ್ತಾಂತರಿಸದಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ