ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಸಿಎಂ ಅನುಮೋದನೆ
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಬೆಂಗಳೂರಿನ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜೊತೆಗೂಡಿ ಪ್ರತಿಮೆ ಸ್ಥಾಪನೆಗೆ ನಿರ್ದಿಷ್ಟ ಸ್ಥಳ ಗುರುತಿಸುವಂತೆ ರಾಜ್ಯ ಲೋಕೋಪಯೋಗಿ ಇಲಾಖೆಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ..ವಿಧಾನಸೌಧದ ಈಶಾನ್ಯ ಭಾಗದ ರೋಸ್ ಗಾರ್ಡನ್ ನಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ನವೆಂಬರ್ 1 ರಂದು ಕೆಂಪೇಗೌಡ ಪ್ರತಿಮೆ ಮತ್ತು ಬಸವೇಶ್ವರ ಪುತ್ಥಳಿ ಅನಾವರಣಗೊಳಿಸಲು ಕ್ರಮ ವಹಿಸುವಂತೆಯೂ ಲೋಕೋಪಯೋಗಿ ಇಲಾಖೆಗೆ ಡಿಪಿಎಆರ್ ನಿಂದ ಸೂಚನೆ ನೀಡಲಾಗಿದೆ. ಸಿಎಂ ಬೊಮ್ಮಾಯಿ ಕಳೆದ ಕೆಂಪೇಗೌಡ ಜಯಂತಿ ವೇಳೆ ವಿಧಾನಸೌಧ ಬಳಿ ಪ್ರತಿಮೆ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದರು. ಸಚಿವ ಡಾ. ಅಶ್ವಥ್ ನಾರಾಯಣ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಸಂಬಂಧ ಸಿಎಂಗೆ ಮನವಿ ಮಾಡಿದ್ದರು. ಇನ್ನು ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಸವೇಶ್ವರ ಪುತ್ಥಳಿ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದರು..ಇದೀಗ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸಿಎಂ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.