ಬೆಂಗಳೂರು,ಆ.21 : ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಆಗುತ್ತಿರುವ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿಯವರು ಮೂರನೇ ಬಾರಿಗೆ ಮತ್ತೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.
ಈ ಬಾರಿಯ ದೆಹಲಿ ಭೇಟಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡುವಂತೆ ಮತ್ತು ರಾಜ್ಯದ ಯೋಜನೆಗಳನ್ನು ಕೇಂದ್ರ ಸಚಿವರೊಂದಿಗೆ ಚರ್ಚಿಸುವ ಉದ್ದೇಶವಿದೆ.
ಇದರೊಂದಿಗೆ ಸಂಪುಟ ರಚನೆಯ ಬಳಿಕ ಹಾಗೂ ಖಾತೆ ಹಂಚಿಕೆ ನಂತರ ರಾಜ್ಯದಲ್ಲಾಗುತ್ತಿರುವ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಕೇಂದ್ರ ನಾಯಕರೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಕೇಂದ್ರದ ಹಲವು ಸಚಿವರುಗಳೊಂದಿಗೆ ಮಾತುಕತೆ ನಡೆಸಲು ಭೇಟಿಯ ಅವಧಿಯನ್ನು ಕೇಳಿದ್ದು ಅವರಿಂದ ಸಮಯ ಅವಕಾಶ ದೃಢಪಟ್ಟ ಕೂಡಲೇ ದೆಹಲಿಗೆ ತೆರಳುತ್ತಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಲಸಿಕೆ ನೀಡುವಂತೆ ಕೋರಲಿದ್ದಾರೆ. ಕರ್ನಾಟಕಕ್ಕೆ ಸದ್ಯ 65 ಲಕ್ಷ ಡೋಸ್ ಲಸಿಕೆ ಪ್ರತಿವರ್ಷ ಸಿಗುತ್ತಿದೆ, ಅದನ್ನು ಒಂದು ಕೋಟಿಗೆ ಹೆಚ್ಚಳ ಮಾಡಬೇಕೆಂಬುದು ಮುಖ್ಯಮಂತ್ರಿಗಳ ಉದ್ದೇಶವಾಗಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಕೂಡ ಭೇಟಿ ಮಾಡಲಿರುವ ಬೊಮ್ಮಾಯಿ ಅವರು ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.