ಅಣ್ಣಾಮಲೈ ಪ್ರತಿಭಟನೆಗೆ ಐ ಡೋಂಟ್ ಕೇರ್ ಎಂದ ಸಿಎಂ ಬೊಮ್ಮಾಯಿ
ಗುರುವಾರ, 5 ಆಗಸ್ಟ್ 2021 (15:29 IST)
ಬೆಂಗಳೂರು(ಅ. 05): ಐದು ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕೆ ಪ್ರಾರಂಭಿಸಲುದ್ದೇಶಿಸಿರುವ ಮೇಕೆದಾಟು ಯೋಜನೆಗೆ ವಿರೋಧಿಸುವ ತನ್ನ ಹಠವನ್ನು ತಮಿಳುನಾಡು ಮುಂದುವರಿಸಿದೆ. ಕರ್ನಾಟಕದ ಐಪಿಎಸ್ ಕೆಡರ್ ಆಗಿದ್ದ ಅಣ್ಣಾಮಲೈ ಅವರು ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನಲ್ಲಿ ಸತ್ಯಾಗ್ರಹ ನಡೆಸಿದ್ದಾರೆ.
ಸಾವಿರಾರು ಕಾರ್ಯಕರ್ತರು, ಕಾರ್ಮಿಕರನ್ನ ಸೇರಿಸಿಕೊಂಡು ತಮ್ಮ ತವರಿನಲ್ಲಿ ಪ್ರತಿಭಟನೆ ನಡೆಸಿದ್ಧಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ನಿಲುವನ್ನು ಕರ್ನಾಟಕದ ರಾಜಕೀಯ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಬಲವಾಗಿ ಖಂಡಿಸಿದ್ಧಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಖಡಕ್ ಮಾತುಗಳನ್ನ ಹೇಳಿದ್ದಾರೆ. ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ. ಅಣ್ಣಾಮಲೈ ಉಪವಾಸ ಬೇಕಾದರೂ ಮಾಡಲಿ, ಊಟ ಬೇಕಾದರೂ ಮಾಡಲಿ. ಐ ಡೋಂಟ್ ಕೇರ್. ಮೇಕೆ ದಾಟು ಯೋಜನೆ ನೆರವೇರುವುದು ನಿಶ್ಚಿತ. ಅದಕ್ಕೆ ಕೇಂದ್ರದಿಂದ ಬೇಕಾದ ಒಪ್ಪಿಗೆ ಪಡೆಯುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಈ ವಿಚಾರದ ಬಗ್ಗೆ ದೆಹಲಿಯಲ್ಲಿ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯಿಸಿ, ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಿಲ್ಲ. ಅವರು ಇನ್ನೂ 100 ವರ್ಷವಾದರೂ ತಮಿಳುನಾಡು ಒಪ್ಪಿಗೆ ಕೊಡಲ್ಲ. ಅದನ್ನ ಬಿಟ್ಟು ಕೇಂದ್ರ ಸರ್ಕಾರದಿಂದ ಏನೇನು ಒಪ್ಪಿಗೆ ಪಡೆಯಬೇಕು ಅದನ್ನ ಪಡೆಯಲಿ. ದಿನೇ ದಿನೇ ಯೋಜನಾ ವೆಚ್ಚ ಹೆಚ್ಚಾಗುತ್ತದೆ. ಆದಷ್ಟೂ ಶೀಘ್ರದಲ್ಲಿ ಯೋಜನೆ ಆರಂಭಿಸಬೇಕು ಎಂದು ಒತ್ತಾಯಿಸಿದ್ಧಾರೆ.
ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ನಲ್ಲಿ ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದವರು ಮಾಧ್ಯಮಗೋಷ್ಠಿ ನಡೆಸಿ ಅಣ್ಣಾಮಲೈ ಪ್ರತಿಭಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ಅಣ್ಣಾಮಲೈ ನಮ್ಮ ರಾಜ್ಯದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಎಲ್ಲವನ್ನೂ ಪಡೆದಿದ್ದಾರೆ. ಈಗ ಅಧಿಕಾರಕ್ಕಾಗಿ ಇಂಥ ಮಹತ್ತರ ಯೋಜನೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಅವರು ಈ ರೀತಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಕರ್ನಾಟಕ ಹಾಗೂ ಕನ್ನಡಿಗರ ಋಣವನ್ನು ಅಣ್ಣಾಮಲೈ ಮರೆಯಬಾರದು. ಸಿಎಂ ಬಸವರಾಜ ಬೊಮ್ಮಾಯಿ ಯಾರ ಒತ್ತಡಕ್ಕೂ ಮಣಿಯದೇ ಯೋಜನೆ ಮುಂದುವರಿಸಲಿ ಎಂದಿದ್ಧಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಾ.ರಾ. ಗೋವಿಂದು, ಬಿ.ಟಿ. ಲಲಿತಾ ನಾಯ್ಕ್, ಮುಖ್ಯಮಂತ್ರಿ ಚಂದ್ರು, ಕನ್ನಡಪರ ಹೋರಾಟಗಾರ ಗಿರೀಶ್ ಗೌಡ ಮೊದಲಾದವರು ಇದ್ದರು.
ರಾಜ್ಯ ಬಿಜೆಪಿಯ ಇತರ ಮುಖಂಡರೂ ಕೂಡ ಅಣ್ಣಾಮಲೈ ನಡೆಯನ್ನು ಆಕ್ಷೇಪಿಸಿದ್ಧಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ವಿ ಸೋಮಣ್ಣ, ಐಪಿಎಸ್ ಆಗುತ್ತಿದ್ದಂತೆಯೇ ದೊಡ್ಡವರಾಗುವುದಿಲ್ಲ. ಇದನ್ನ ಅಣ್ಣಾಮಲೈ ಅರ್ಥ ಮಾಡಿಕೊಳ್ಳಬೇಕು. ಅವರು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿದ್ದಾರೆ. ಮೇಕೆದಾಟು ಯೋಜನೆ ನಮ್ಮ ಭಾಗದಲ್ಲಿ ಆಗಲಿದೆ. ಅವರ ಕಂಡೀಷನ್ಗು ನಾವು ಬದ್ಧರಾಗಿದ್ದೇವೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಈ ಯೋಜನೆ ಅಗತ್ಯ ಇದೆ. ಇದು ಅವರಿಗೂ ಅರ್ಥ ಆಗುತ್ತದೆ. ಒಂದು ರಾಜ್ಯಕ್ಕೆ ಮತ್ತೊಂದು ರಾಜ್ಯದ ಜೊತೆ ಬಾಂಧವ್ಯ ಇರಬೇಕು ಎಂದು ಸೋಮಣ್ಣ ತಿಳಿಹೇಳಿದ್ದಾರೆ.ಇನ್ನು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಅಣ್ಣಾಮಲೈ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೇಕೆ ದಾಟು ಯೋಜನೆ ನಮ್ಮ ಹಕ್ಕು ಎಂದು ಈ ಹಿಂದೆ ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಿದ್ಧಾರೆ. ಇದನ್ನ ತಡೆಯಲು ಯಾರಿಗೂ ಸಾಧ್ಯವಿಲ್ಲ. ಅಣ್ಣಾಮಲೈ ಯಾಕೆ ಅಡ್ಡಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ ನಮ್ಮ ಪರವಾಗಿ ತೀರ್ಪು ಕೊಟ್ಟಿದೆ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟಿದ್ಧಾರೆ.
ಸಂಸತ್ನಲ್ಲಿ ಪ್ರಜ್ವಲ್ ಪ್ರಸ್ತಾಪ:ಅತ್ತ ದೆಹಲಿಯಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಸಂಸತ್ನಲ್ಲಿ ಮೇಕೆದಾಟು ಯೋಜನೆ ವಿವಾದವನ್ನು ಪ್ರಸ್ತಾಪಿಸಿ ಪ್ರಶ್ನೆ ಹಾಕಿದ್ದಾರೆ. ಮೇಕೆದಾಟು ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಮ್ಮತಿ ಇನ್ನೂ ಸಿಕ್ಕಿಲ್ಲ ಎಂಬ ವಾಸ್ತವ ಸಂಗತಿಯನ್ನ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ತಿಳಿಸಿ ಶಾಕ್ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ತಮಿಳುನಾಡು ವಾದವನ್ನೇ ಒಪ್ಪಿಕೊಂಡಂತಿದೆ ಎಂದು ಪ್ರಜ್ವಲ್ ರೇವಣ್ಣ ಅವರು ನ್ಯೂಸ್18 ಕನ್ನಡ ಜೊತೆ ಮಾತನಾಡುತ್ತಾ ಆತಂಕ ವ್ಯಕ್ತಪಡಿಸಿದ್ದಾರೆ. ಬೊಮ್ಮಾಯಿ ಅವರು ತಮ್ಮ ಗಟ್ಟಿ ನಿಲುವಿಗೆ ಬದ್ಧರಾಗಿರಬೇಕು. ಅವರಿಗೆ ಯಾವ ಬೆಂಬಲ ಬೇಕಾದರೂ ಕೊಡುತ್ತೇವೆ ಎಂದು ಜೆಡಿಎಸ್ ಸಂಸದ ಹೇಳಿದ್ಧಾರೆ.