ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ವಿವರಗಳನ್ನು ಬಿ ರಿಜಿಸ್ಟ್ರರ್‍ನಲ್ಲಿ ದಾಖಲಿಸಲಾಗಿದ್ದು, ಸದರಿ ಸ್ವತ್ತುಗಳನ್ನು ಎ ಖಾತೆಗೆ ದಾಖಲಿಸಲು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅನಿಯಮ ಹಾಗೂ ಕರ್ನಾಟಕ ಭೂ ಕಂದಾಯ ಅನಿಯಮಗಳಡಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಜನಜೀವನ ಸುಗಮಗೊಳಿಸಲು, ಸಂಚಾರ ದಟ್ಟಣೆ ನಿವಾರಿಸಲು ಹಾಗೂ ನಗರದ ಪರಿಸರದಲ್ಲಿ ಕೆರೆಗಳ ಅಭಿವೃದ್ಧಿ, ಹಸಿರು ಹೊದಿಕೆ ಹೆಚ್ಚಿಸುವ ಮೂಲಕ ಸೌಂದರ್ಯ ವೃದ್ಧಿಗೂ ಈ ಬಾರಿಯ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ.
ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆರು ಸಾವಿರ ಕೋಟಿ ರೂ.ಗಳ ಅಮೃತ್ ನಗರೋತ್ಥಾನ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿಯಲ್ಲಿ ಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ, ಗ್ರೇಡ್ ಸಪರೇಟರ್, ಕೆರೆ ಅಭಿವೃದ್ಧಿ, ಬೃಹತ್ ನೀರುಗಾಲುವೆ ಅಭಿವೃದ್ಧಿ, ಉದ್ಯಾನವನಗಳ ಅಭಿವೃದ್ಧಿ, ಕಟ್ಟಡಗಳು, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳು ಮತ್ತು ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು.