ಕಾಂಗ್ರೆಸ್ ನೊಳಗೇ ಸಿಎಂ ಬದಲಾವಣೆ ಪ್ರಯತ್ನ ನಡೆಯುತ್ತಿದೆ: ಅಶ್ವತ್ಥ ನಾರಾಯಣ್ ಬಾಂಬ್

Krishnaveni K

ಗುರುವಾರ, 14 ನವೆಂಬರ್ 2024 (17:37 IST)
ಬೆಂಗಳೂರು: ಸಿದ್ದರಾಮಯ್ಯನವರು ತಮ್ಮ ಹೇಳಿಕೆ ಮೂಲಕ ತಮ್ಮ ಪಕ್ಷವಾದ ಕಾಂಗ್ರೆಸ್ಸಿನ ಹೈಕಮಾಂಡಿಗೆ ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.

ಪುಣೆಯಲ್ಲಿ ಇಂದು ಪತ್ರಿಕಾ ಹೇಳಿಕೆ ನೀಡಿದ ಅವರು, ನನ್ನನ್ನು ಯಾರೂ ಬದಲಿಸಲು ಸಾಧ್ಯವಿಲ್ಲ; ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಿದ್ದಾರೆ. ಇದು ಆಶ್ಚರ್ಯ ತರುವಂತಿದೆ ಎಂದು ವಿಶ್ಲೇಷಿಸಿದರು.

ತಮ್ಮನ್ನು ಬದಲಿಸಲು ಹೋದರೆ ಇಡೀ ಕರ್ನಾಟಕದಲ್ಲೇ ಗೊಂದಲ ನಿರ್ಮಾಣವಾಗಲಿದೆ; ಜನರ ಆಕ್ರೋಶ ಇರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಇದರ ಜೊತೆಗೆ ಅವರ ಮೇಲಿನ ಆಪಾದನೆ ಸತ್ಯಕ್ಕೆ ದೂರ ಎಂದು ತಿಳಿಸಿದ್ದಾರೆ. ನ್ಯಾಯಾಂಗ, ಕಾನೂನಿನ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಟೀಕಿಸಿದರು.
ಶಾಸÀಕರನ್ನು ಕೊಂಡುಕೊಂಡು ಸರಕಾರ ಬೀಳಿಸಲು ಮುಂದಾಗಿದ್ದಾರೆ ಎಂಬುದು ಸತ್ಯದೂರ ವಿಚಾರ. ಸಿದ್ದರಾಮಯ್ಯನವರ ಸರಕಾರದಲ್ಲಿ ಅವರ ತೆರವಿಗೆ ಅವರ ಶಾಸಕರೇ ಮುಂದಾಗಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಸ್ಥಾನ ತೆರವುಗೊಳಿಸಬೇಕೆಂದು ಬಯಸುವ ಮುಖ್ಯಮಂತ್ರಿ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂದು ವಿವರಿಸಿದರು.

ಸಿದ್ದರಾಮಯ್ಯನವರೇ ನಿಮಗೆ ಹೊರಗಿನಿಂದ ತೊಂದರೆ ಇಲ್ಲ; ನಿಮ್ಮ ಪಕ್ಷದೊಳಗೇ ನಿಮ್ಮನ್ನು ಬದಲಿಸುವ ಪ್ರಯತ್ನ ನಡೆದಿದೆ. ನಿಮ್ಮ ಮೇಲೆ ಭ್ರಷ್ಟಾಚಾರದ ಸಾಕಷ್ಟು ಆಪಾದನೆಗಳಿವೆ. ಈಗಾಗಲೇ ತನಿಖೆಯೂ ನಡೆದಿದೆ. ಈ ಎಲ್ಲ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಗೌರವಾನ್ವಿತರಾಗಿ ತಮ್ಮ ಸ್ಥಾನವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಅಲ್ಲಸಲ್ಲದ ಆಪಾದನೆ ಮಾಡುವುದು, ತಮ್ಮದೇ ಹೈಕಮಾಂಡನ್ನು ಹೆದರಿಸುವುದು ಮತ್ತು ಪ್ರತಿಪಕ್ಷವಾದ ಬಿಜೆಪಿ ಮೇಲೆ ಅಲ್ಲಸಲ್ಲದ ಆಪಾದನೆ ಮಾಡುತ್ತಿರುವುದು ಸರಿಯಲ್ಲ; ನಾವು ನಿಮ್ಮ ಪಕ್ಷದ ಶಾಸಕರನ್ನು ಕೊಂಡುಕೊಳ್ಳುತ್ತಿರುವ ಹೇಳಿಕೆಗೆ ಒಂದೇ ಒಂದು ಸಾಕ್ಷಿ ಕೊಡಿ ಎಂದು ಸವಾಲು ಹಾಕಿದರು.
 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ