ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಮೇಲೆ ಮಾಡಿದ ಆರೋಪಕ್ಕೆ ಅವರು ಪುಣೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಬಿಜೆಪಿ, 50 ಕೋಟಿ ಕೊಟ್ಟು ಶಾಸಕರನ್ನು ಖರೀದಿಸಲು ಹೊರಟಿದೆ ಎಂದು ತಿಳಿಸಿದ್ದಾರೆ. ಹಾಗಿದ್ದರೆ ನಿಮ್ಮ ಪಕ್ಷದ ಶಾಸಕರು ಅಷ್ಟೊಂದು ದುರ್ಬಲರೇ? ಖರೀದಿ ಮಾಡಲು ಕಾಂಗ್ರೆಸ್ ಶಾಸಕರು ಕುದುರೆಯೇ, ಕತ್ತೆಯೇ ಅಥವಾ ದನವೇ? ಕುದುರೆ, ಕತ್ತೆ, ದನ ಖರೀದಿಸಬಹುದು. ಬದ್ಧತೆ ಇರುವ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.
ಆಧಾರಸಹಿತ ನಿರೂಪಿಸದೆ ಇದ್ದಲ್ಲಿ ಸುಳ್ಳು ಆರೋಪ ಮಾಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದಲ್ಲಿ 137 ಶಾಸಕರಿದ್ದಾರೆ. ನಿಮ್ಮನ್ನು ಅಲುಗಾಡಿಸುವವರು ಯಾರು? ನಿಮ್ಮನ್ನು ಅಲುಗಾಡಿಸಲು ಹೊರಗಡೆ ಯಾರ ಕೈಯಿಂದಲೂ ಸಾಧ್ಯವಿಲ್ಲ. ಒಳಗಡೆ ನಿಮ್ಮ ಪಕ್ಷದ ಬಲವಾದವರು ನೇತೃತ್ವ ವಹಿಸಿ ಸರಕಾರವನ್ನು ಅಲುಗಾಡಿಸಬೇಕೇ ಹೊರತು ಇನ್ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಆ ಸ್ಥಾನದ ಜವಾಬ್ದಾರಿಯನ್ನು ಮರೆತು ಕೇವಲ ಆರೋಪ ಮಾಡುವುದು ರಾಜಕೀಯಪ್ರೇರಿತ; ಬಿಜೆಪಿಯ ಮೇಲೆ ತಪ್ಪು ಅಭಿಪ್ರಾಯ ರೂಪಿಸಲು ಮಾಡುತ್ತಿರುವ ರಾಜಕೀಯ ಷಡ್ಯಂತ್ರದ ಭಾಗ ಎಂದು ಆಕ್ಷೇಪಿಸಿದರು. ನಿಮ್ಮ ಇತ್ತೀಚಿನ ನಡವಳಿಕೆಗಳನ್ನು ನೋಡಿದಾಗ ದಿನನಿತ್ಯ ಸುಳ್ಳು ಹೇಳುವುದು ನಿಮ್ಮ ರಾಜಕೀಯ ಬದುಕಿನ ಭಾಗವಾಗಿದೆ ಎಂದು ಆರೋಪಿಸಿದರು.