ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದೆ. ಪಂಚಮಸಾಲಿ ಮತಗಳು ಅಧಿಕವಾಗಿದ್ದರಿಂದ ವಿನಯ್ ಕುಲಕರ್ಣಿ ಮೂಲಕ ಸಿಎಂ ಬೊಮ್ಮಾಯಿ ಹಣಿಯಲು ಕಾಂಗ್ರೆಸ್ ಮುಂದಾಗಿದೆ. ಇನ್ನು ಈ ಬಗ್ಗೆ ಸ್ವತಃ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಕುಲಕರ್ಣಿ, ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನನ್ನ ನಿರ್ಧಾರವಲ್ಲ. ಸಿಎಂ ವಿರುದ್ಧ ಸ್ಪರ್ಧೆ ಮಾಡಬೇಕೆಂಬುದು ಹೈಕಮಾಂಡ್ ನಿರ್ಧಾರ ಎಂದು ಸ್ಪಷ್ಟಪಡಿಸಿದರು. ಧಾರವಾಡಕ್ಕೆ ಹೋಗುವುದಕ್ಕೆ ನನಗೆ ಕೋರ್ಟ್ ನಿರ್ಬಂಧ ಇದೆ. ನಾನು ಶಿಗ್ಗಾವಿಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಶಿಗ್ಗಾವಿ ಒಂದೇ ಅಲ್ಲ, ನನಗೆ ಇನ್ನೂ ನಾಲ್ಕೈದು ಕ್ಷೇತ್ರಗಳಿವೆ. ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿರುವುದಕ್ಕೆ ನಾನು ಸಾಕ್ಷಿ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಹೇಳಿದ್ರು. ಈ ಹಿನ್ನೆಲೆಯಲ್ಲಿ ಹಾಲಿ ಕ್ಷೇತ್ರ ಬಿಟ್ಟು ಸಿಎಂ ಬೊಮ್ಮಾಯಿ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ದಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸೋಕೆ ಸಿಎಂ ಬೊಮ್ಮಾಯಿ ಚಿಂತನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.