ಬೆಂಗಳೂರು: ಲೋಕಸಭೆ ಚುನಾವಣೆ ಬೆನ್ನಲ್ಲೇ ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ 50 ಕೋಟಿ ಆಫರ್ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಟಿಕೆಟ್ ಗೆ ಕಸರತ್ತು ನಡೆಯುತ್ತಿದ್ದು, ಪಕ್ಷಾಂತರ ಪರ್ವ ಜಾರಿಯಲ್ಲಿರುವಾಗ ಸಿಎಂ ಸಿದ್ದರಾಮಯ್ಯ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ವಿಪಕ್ಷಗಳ ನಾಯಕರ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗಳ ಬಗ್ಗೆಯೂ ಅವರು ಪ್ರಶ್ನೆ ಮಾಡಿದ್ದಾರೆ.
ಶ್ರೀಮಂತರು ಕೇವಲ ವಿಪಕ್ಷಗಳಲ್ಲಿ ಮಾತ್ರ ಇದ್ದಾರೆಯೇ? ಬಿಜೆಪಿಯಲ್ಲಿರುವ ಶ್ರೀಮಂತರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ‍್ಣಿಗೆ ಕಾಣಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಚುನಾವಣೆ ವೆಚ್ಚಕ್ಕೆ ಹಣ ನೀಡುತ್ತೇವೆ. 50 ಕೋಟಿ ರೂ. ನೀಡುತ್ತೇವೆ ಎಂದು ಬಿಜೆಪಿ ಆಪರೇಷನ್ ಕಮಲ ಮಾಡಲು ಯತ್ನಿಸುತ್ತಿದೆ. ಹಾಗಿದ್ದರೆ ಅವರು ಎಲ್ಲಿಂದ ಹಣ ತರುತ್ತಿದ್ದಾರೆ. ಅವರ ಹಣದ ಮೂಲ ಯಾವುದು ಎಂದು ತನಿಖೆ ನಡೆಯುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮೆಲ್ಲರ ಹಣವನ್ನು ಐಟಿ ಅಧಿಕಾರಿಗಳು ಸೀಝ್ ಮಾಡಿದ್ದಾರೆ. ಎಂಎಲ್ ಎ ಟಿಕೆಟ್ ಆಕಾಂಕ್ಷಿಗಳಿಂದ ತಲಾ 2 ಲಕ್ಷ ರೂ.ಗಳಂತೆ 21 ಕೋಟಿ ಸಂಗ್ರಹ ಮಾಡಿದ್ದೇವೆ. ಅದೆಲ್ಲವನ್ನೂ ಈಗ ಐಟಿ ಸೀಝ್ ಮಾಡಿದೆ. ರಾಜ್ಯ ಕಾಂಗ್ರೆಸ್ ಖಾತೆಯಲ್ಲಿದ್ದ 118 ಕೋಟಿ ರೂ.ಗಳನ್ನೂ ಸೀಝ್ ಮಾಡಲಾಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.