ಟಿಕೆಟ್ ಸಿಗಲಿಲ್ಲವೆಂದು ಬುಸುಗುಡುತ್ತಿರುವ ರಾಜ್ಯ ಬಿಜೆಪಿ ಘಟಾನುಘಟಿ ನಾಯಕರ ಲಿಸ್ಟ್

Krishnaveni K

ಬುಧವಾರ, 20 ಮಾರ್ಚ್ 2024 (13:55 IST)
ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಕರ್ನಾಟಕದಲ್ಲಿ 5 ಸ್ಥಾನ ಬಿಟ್ಟು ಉಳಿದೆಲ್ಲಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಇದೀಗ ಟಿಕೆಟ್ ಸಿಗದ ಅಸಮಾಧಾನಿತರು ತಮ್ಮದೇ ದಾರಿ ನೋಡಿಕೊಳ್ಳುವ ಎಚ್ಚರಿಕೆ ನೀಡುತ್ತಿದ್ದಾರೆ.

ಈ ಬಾರಿ ಘಟಾನುಘಟಿಗಳನ್ನೇ ಸೈಡ್ ಲೈನ್ ಮಾಡಿ ಕೆಲವು ಹೊಸಬರಿಗೆ ಬಿಜೆಪಿ ಮಣೆ ಹಾಕಿದೆ. ಹೀಗಾಗಿ ಟಿಕೆಟ್ ವಂಚಿತರ ಪೈಕಿ ಮಾಜಿ ಸಿಎಂ ಡಿವಿ ಸದಾನಂದಗೌಡ, ಕೆಎಸ್ ಈಶ್ವರಪ್ಪ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಮಾಧುಸ್ವಾಮಿ ಮುಂತಾದ ಘಟಾನುಘಟಿ ನಾಯಕರಿದ್ದಾರೆ. ಇವರಲ್ಲಿ ಕೆಲವರು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದರೆ ಕೆಲವರು ಬೇರೆ ಪಕ್ಷಗಳತ್ತ ದೃಷ್ಟಿ ನೆಟ್ಟಿದ್ದಾರೆ. ಅವರು ಯಾರೆಂದು ನೋಡೋಣ.

ಡಿವಿ ಸದಾನಂದ ಗೌಡ: ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಿ ಅಧಿಕಾರ ಅನುಭವಿಸಿದ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿವಿ ಸದಾನಂದ ಗೌಡ ಈಗ ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ಸಿಗಲಿಲ್ಲ. ಇದೀಗ ಸಿಟ್ಟಿಗೆದ್ದಿರುವ ಸದಾನಂದ ಗೌಡ ಕಾಂಗ್ರೆಸ್ ಸೇರಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸಂಪರ್ಕಿಸಿರುವುದು ನಿಜ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಹಸಿರು ನಿಶಾನೆ ತೋರದ ಕಾರಣ ಅವರನ್ನು ಇನ್ನೂ ಕಾಂಗ್ರೆಸ್ ಗೆ ಸೇರ್ಪಡೆಗೊಳಿಸಲಾಗಿಲ್ಲ.

ಮಾಧುಸ್ವಾಮಿ: ತುಮಕೂರಿನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜಿ. ಮಾಧುಸ್ವಾಮಿ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶ ಭರಿತರಾಗಿದ್ದಾರೆ. ಯಡಿಯೂರಪ್ಪ ತಮಗೆ ಬೆಂಬಲ ನೀಡಲಿಲ್ಲವೆಂದು ಸಿಟ್ಟಿಗೆದ್ದಿರುವ ಮಾಧುಸ್ವಾಮಿ ಈಗ ತಮ್ಮ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಕೆಎಸ್ ಈಶ್ವರಪ್ಪ: ಅತ್ತ ಪುತ್ರ ಕಾಂತೇಶನಿಗೆ ಟಿಕೆಟ್ ಸಿಗಲಿಲ್ಲ, ಇತ್ತ ತಮಗೂ ಸಿಗಲಿಲ್ಲ ಎಂದು ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ ರಾಜ್ಯ ನಾಯಕರ ವಿರುದ್ಧ ತಿರುಗಿಬಿದ್ದಿದ್ದು, ಶಿವಮೊಗ್ಗದಿಂದ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ