ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಮಧ‍್ಯಾಹ್ನ ನಡೆದ ಸ್ಪೋಟಕ್ಕೂ ಕೆಲವು ಸಮಯದ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಸಾಮ್ಯತೆ ಇದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಎರಡೂ ಪ್ರಕರಣಗಳೂ ಒಂದೇ ರೀತಿಯಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ತಪ್ಪಿತಸ್ಥರನ್ನು ಯಾರನ್ನೂ ರಕ್ಷಿಸಲ್ಲ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಮಾಧ‍್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಹೆಸರು ಹಾಳು ಮಾಡುವ ಉದ್ದೇಶದಿಂದ ದಾಳಿ ನಡೆದಿದೆ. ಘಟನೆ ಬಗ್ಗೆ ಬಿಜೆಪಿಯವರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಅವರು ಮಾಡಿದರೆ ಮಾಡಲಿ. ನಾವು ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ಕೊಟ್ಟಿದ್ದೇವೆ ಎಂದಿದ್ದಾರೆ ಡಿಸಿಎಂ.
ಆದರೆ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇದಕ್ಕೆ ಮೊದಲು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ವಿಭಿನ್ನ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೂ ರಾಮೇಶ್ವರಂ ಕೆಫೆ ಪ್ರಕರಣಕ್ಕೂ ಸಾಮ್ಯತೆಯಿಲ್ಲ ಎಂದಿದ್ದರು. ಇದೀಗ ಸಿಎಂ ಮತ್ತು ಡಿಸಿಎಂ ವಿಭಿನ್ನ ಹೇಳಿಕೆ ನೀಡಿರುವುದು ಗೊಂದಲಕಾರಿಯಾಗಿದೆ.