ಬೆಂಗಳೂರು: ವೈಟ್ ಫೀಲ್ಡ್ ನ ರಾಮೇಶ‍್ವರಂ ಕೆಫೆಯಲ್ಲಿ ನಿನ್ನೆ ನಡೆದ ಸ್ಪೋಟಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಗುಪ್ತಚರ ಇಲಾಖೆ ಅಧಿಕಾರಿಗಳು ನಾಲ್ವರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಮಧ‍್ಯಾಹ್ನ ಊಟದ ಸಮಯದಲ್ಲಿ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿತ್ತು. ಪರಿಣಾಮ 9 ಮಂದಿ ಗಾಯಗೊಂಡಿದ್ದರು. ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಬಂದಿದ್ದರು. ಬಳಿಕ ಗುಪ್ತಚರ ಇಲಾಖೆ, ಎನ್ಐ ಎ ಅಧಿಕಾರಿಗಳು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಬಂದು ಪರಿಶೀಲನೆ ನಡೆಸಿದ್ದವು.
ಶಂಕಿತ ವ್ಯಕ್ತಿಯೊಬ್ಬ ಕೆಫೆಗೆ ಬಂದು ರವೆ ಇಡ್ಲಿ ತಿಂದು ವಾಪಸ್ ಹೋಗುವಾಗ ಬಾಂಬ್ ಇದ್ದ ಬ್ಯಾಗ್ ಅಲ್ಲೇ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಸ್ಪೋಟ ಸಂಭವಿಸಿದ ಬಳಿಕ ಸ್ಥಳದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಹೀಗಾಗಿ ಟೈಮರ್ ಫಿಕ್ಸ್ ಮಾಡಿ ಬ್ಯಾಗ್ ಇಟ್ಟು ಹೋಗಿರಬಹುದು ಎನ್ನಲಾಗಿತ್ತು.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಪೊಲೀಸರ ಸಭೆ ಕರೆಯಲಾಗಿದ್ದು, ವಿಚಾರಣೆ ಇನ್ನಷ್ಟು ಚುರುಕಾಗಿ ನಡೆಯಲಿದೆ. ಇದುವರೆಗೆ ಈ ಸ್ಪೋಟಕ್ಕೆ ಯಾವುದೇ ಭಯೋತ್ಪಾದಕ ಸಂಘಟನೆಯೂ ಹೊಣೆ ಹೊತ್ತಿಲ್ಲ.