ಸಿಎಂ ಸಿದ್ದರಾಮಯ್ಯ ಮಾಡಿದ್ದು ಅಕ್ಷಮ್ಯ ಅಪರಾಧ: ಸದನದಲ್ಲಿ ಗಮನ ಸೆಳೆದ ಬಿವೈ ವಿಜಯೇಂದ್ರ

Krishnaveni K

ಮಂಗಳವಾರ, 16 ಜುಲೈ 2024 (20:41 IST)
ಬೆಂಗಳೂರು: ರಾಜ್ಯ ಸರಕಾರದ ಕೆಲವರ ಬೆದರಿಕೆ ಮತ್ತು ಒತ್ತಡವೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿಯನ್ನು ಹಗರಣಕ್ಕೆ ಬಳಸಿಕೊಂಡಿದ್ದಾರೆ. ಹಣವನ್ನು ಹೊರರಾಜ್ಯಕ್ಕೆ ಕಳುಹಿಸುವ ಕೆಲಸ ಮಾಡಿದ್ದಾರೆ. ಇದು ಕೇವಲ ಹಗರಣವಲ್ಲ; ಇದು ಅಕ್ಷಮ್ಯ ಅಪರಾಧ ಎಂದು ಸಭಾಧ್ಯಕ್ಷರ ಗಮನಕ್ಕೆ ತಂದರು. ಅಲ್ಲದೆ, ಮಾನ್ಯ ಮುಖ್ಯಮಂತ್ರಿಗಳು ಹಣಕಾಸಿನ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾನ್ಯ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ರಾಜ್ಯದ ಜನರ ಪರವಾಗಿ ಒತ್ತಾಯವನ್ನು ಸದನದ ಮುಂದಿಟ್ಟರು.
ಯಾರೋ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರೆ ನಾನು ರಾಜೀನಾಮೆ ಕೊಡಬೇಕಾ ಎಂದು ಆಗ ಸಚಿವರೂ ಹೇಳಿಕೆ ನೀಡಿದ್ದರು. ಇನ್ನೊಂದೆಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕೇವಲ ಅಧಿಕಾರಿಗಳು ಮಾತ್ರ ಒಳಗೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳೂ ಹೇಳಿಕೆ ನೀಡಿದ್ದರು ಎಂದು ಆಕ್ಷೇಪಿಸಿದರು.

ಯಾವುದೇ ಶಾಸಕರು, ಸಚಿವರು ಇದರಲ್ಲಿ ಇಲ್ಲ. ಕೇವಲ ಅಧಿಕಾರಿಗಳಿಂದ ಆದ ಹಗರಣ ಇದೆಂದು ಹೇಳಿಕೆ ನೀಡಿದ್ದು, ಅಕ್ಷಮ್ಯ ಅಪರಾಧ ಎಂದು ಸಭಾಧ್ಯಕ್ಷರ ಗಮನ ಸೆಳೆದರು. ಈ ಸರಕಾರವು ಅಧಿಕಾರಕ್ಕೆ ಬಂದಾಗ ವಿರೋಧ ಪಕ್ಷ ಮಾತ್ರವಲ್ಲ; ರಾಜ್ಯದ ಜನತೆಯೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಿಂದ ರಾಜ್ಯ ಸರಕಾರವು ಶೋಷಿತ, ಪೀಡಿತ ಮತ್ತು ದಲಿತರ ಧ್ವನಿಯಾಗಿ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ತಿಳಿಸಿದರು.

ಒಂದು ಕಡೆ ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನೊಂದೆಡೆ, 2022-23ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರತಕ್ಕ ವಿವಿಧ ನಿಗಮಗಳ ಯೋಜನೆಗಳ ಅನುಷ್ಠಾನಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ಆದ ಲೋಪಗಳ ಮಾಹಿತಿ ನೀಡಬಯಸುವುದಾಗಿ ಹೇಳಿದರು. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ 190 ಕೋಟಿ ಅನುದಾನ ಮೀಸಲಿಟ್ಟಿದ್ದರು. ಕೇವಲ 145 ಕೋಟಿ ಖರ್ಚು ಮಾಡಿದ್ದಾರೆ. ಕರ್ನಾಟಕ ಮರಾಠ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ಮೀಸಲಿಟ್ಟರೆ 70 ಕೋಟಿ ಮಾತ್ರ ಬಿಡುಗಡೆಯಾಗಿದೆ. ಕೇವಲ 39 ಕೋಟಿ ವ್ಯಯಿಸಿದ್ದಾರೆ ಎಂದು ಗಮನಕ್ಕೆ ತಂದರು.

ಕರ್ನಾಟಕ ವಿಶ್ವಕರ್ಮ ಸಮುದಾಯಕ್ಕೆ 25 ಕೋಟಿ ಮೀಸಲಿಟ್ಟು ಕೇವಲ 14 ಕೋಟಿ ವೆಚ್ಚ ಮಾಡಿದ್ದಾರೆ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ಮೀಸಲಿಟ್ಟಿದ್ದರೆ ಕೇವಲ 9.28 ಕೋಟಿ ವೆಚ್ಚ ಮಾಡಿದ್ದು, 15 ಕೋಟಿ ಬಾಕಿ ಉಳಿದಿದೆ ಎಂದು ವಿವರ ನೀಡಿದರು. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 15 ಕೋಟಿ ಕೊಟ್ಟಿದ್ದು, 6.5 ಕೋಟಿ ಖರ್ಚಾಗಿದ್ದು, 8.5 ಕೋಟಿ ಖರ್ಚಾಗಿಲ್ಲ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಕೊಟ್ಟಿದ್ದು, 24 ಕೋಟಿ ಮಾತ್ರ ಖರ್ಚು ಮಾಡಿದ್ದಾರೆ. 75 ಕೋಟಿಗೂ ಹೆಚ್ಚು ಖರ್ಚಾಗುವುದಿಲ್ಲ. ಅಲೆಮಾರಿಗಳ ಅಭಿವೃದ್ಧಿ ನಿಗಮಕ್ಕೆ 14 ಕೋಟಿ ಕೊಟ್ಟಿದ್ದು, ಕೇವಲ 6.5 ಕೋಟಿ ಮಾತ್ರ ಖರ್ಚಾಗಿದೆ ಎಂದು ಸಭಾಧ್ಯಕ್ಷರ ಗಮನಕ್ಕೆ ತಂದರು.
2023-24ನೇ ಸಾಲಿನಲ್ಲಿ ಹೆಚ್ಚು ಅನುದಾನದ ನಿರೀಕ್ಷೆ ಮಾಡಿದ್ದೆವು. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ 22-23ರಲ್ಲಿ 190 ಕೋಟಿ ಅನುದಾನ ಮೀಸಲಿಟ್ಟಿದ್ದರೆ ಈ ಸಾಲಿನಲ್ಲಿ ಕೇವಲ 100 ಕೋಟಿ ನೀಡಿದ್ದಾರೆ. 100 ಕೋಟಿ ಘೋಷಿಸಿದ್ದರೂ ಕೇವಲ 50 ಕೋಟಿ ಬಿಡುಗಡೆ ಮಾಡಿದ್ದಾರೆ. 35 ಕೋಟಿ ವೆಚ್ಚ ಮಾಡಿ 14 ಕೋಟಿಗೂ ಹೆಚ್ಚು ಉಳಿಸಿಕೊಂಡಿದ್ದಾರೆ ಎಂದು ಸಭಾಧ್ಯಕ್ಷರ ಮೂಲಕ ಸದನದ ಗಮನ ಸೆಳೆದರು.

ಅದೇರೀತಿ ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಕಳೆದ ಬಾರಿ 25 ಕೋಟಿ ಮೀಸಲಿಟ್ಟಿದ್ದರೆ, ಈ ಬಾರಿ 13 ಕೋಟಿ ಮೀಸಲಿಟ್ಟಿದ್ದಾರೆ. ಕೇವಲ 6.5 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. 2.63 ಕೋಟಿ ಮಾತ್ರ ವೆಚ್ಚವಾಗಿದೆ ಎಂದು ಗಮನಕ್ಕೆ ತಂದರು. ಈ ರೀತಿ ಎಲ್ಲ ಅಭಿವೃದ್ಧಿ ನಿಗಮಗಳಲ್ಲೂ ಆಗಿದೆ. ದಲಿತರು, ಪರಿಶಿಷ್ಟ ಜಾತಿ, ಪಂಗಡಗಳ ಹೆಸರು ಹೇಳಿಕೊಂಡು, ಹಿಂದುಳಿದ ಸಮಾಜಗಳನ್ನು ಉದ್ಧಾರ ಮಾಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಕಳೆದ ವರ್ಷಕ್ಕಿಂತ ಕಡಿಮೆ ಅನುದಾನ ನೀಡಿದೆ. ಕೊಟ್ಟ ಅನುದಾನವನ್ನೂ ಸಂಪೂರ್ಣವಾಗಿ ಖರ್ಚು ಮಾಡಿಲ್ಲ ಎಂದು ವಿವರಿಸಿದರು.
 
ಜನತೆಗೆ ಆದ ಅನ್ಯಾಯದ ವಿರುದ್ಧ ಹೋರಾಟ..
ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ರಾಜ್ಯಾದ್ಯಂತ ಹೋರಾಟವನ್ನೂ ನಡೆಸಿದೆ. ರಾಜಕೀಯ ಕಾರಣಕ್ಕಾಗಿ ಸದನದಲ್ಲಿ ಈ ಹಗರಣವನ್ನು ಪ್ರಸ್ತಾಪ ಮಾಡುತ್ತಿಲ್ಲ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ದುರುಪಯೋಗ ಆಗಿದೆ; ಸಾಕಷ್ಟು ಅಧಿಕಾರಿಗಳು, ಸಚಿವರು, ಶಾಸಕರ ಹೆಸರು ಕೂಡ ಇದರಲ್ಲಿ ಕೇಳಿ ಬರುತ್ತಿದೆ. ಜನತೆಗೆ ಆದ ಅನ್ಯಾಯವನ್ನು ನಾವು ಕೈಗೆತ್ತಿಕೊಂಡಿದ್ದೇವೆ ಎಂದು ತಿಳಿಸಿದರು.
 
ಹಿರಿಯರಾದ ಶ್ರೀನಿವಾಸ ಪ್ರಸಾದ್ ಅವರು ದಲಿತರ ಧ್ವನಿಯಾಗಿ ಸದಾ ಕೆಲಸ ಮಾಡಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಹಾಡಹಗಲೇ ದರೋಡೆ, ಲೂಟಿ ಮಾಡಿ, ಈ ಸರಕಾರವು ಕಣ್ಮುಚ್ಚಿ ಕುಳಿತಿದೆ. ಇಂಥ ಅನುಭವಿ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದಾಗ, ಅವರೇ ಹಣಕಾಸು ಇಲಾಖೆ ನಿರ್ವಹಿಸುವ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಕರಣ ನಡೆದಿದೆ; ನನಗೇನೂ ಗೊತ್ತಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು, ಸಿಎಂ ಅವರು ರಾಜ್ಯದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸದನದ ಗಮನಕ್ಕೆ ತಂದರು.

ತಡವಾದರೂ ಮುಖ್ಯಮಂತ್ರಿಗಳು ಸಚಿವರ ರಾಜೀನಾಮೆ ಪಡೆದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ, ಪಕ್ಷಕ್ಕೆ ದುಡಿದ ನಾನ್ಯಾಕೆ ರಾಜೀನಾಮೆ ಕೊಡಬೇಕೆಂದು ನಾಗೇಂದ್ರರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದರೆಂಬ ವಿಚಾರ ಪತ್ರಿಕೆಗಳಲ್ಲೂ ಬಂದಿದೆ ಎಂದು ತಿಳಿಸಿದರು. ಆದರೂ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆದಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಗರಣದಲ್ಲಿ ಅಧಿಕಾರಿಗಳ ಪಾತ್ರ ಮಾತ್ರ ಇದೆ. ಶಾಸಕರು, ಸಚಿವರ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳುವ ಪ್ರಯತ್ನ ಮಾಡಿದರು. ರಾಜ್ಯದ ಉಪ ಮುಖ್ಯಮಂತ್ರಿಗಳು ಮಾಜಿ ಸಚಿವ ನಾಗೇಂದ್ರರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ನಿಲುವು ರಾಜ್ಯದ ದಲಿತರಿಗೆ ಮಾಡಿದ ಅನ್ಯಾಯ ಎಂದು ತಿಳಿಸಿದರು.

ಕಾನೂನುಬಾಹಿರವಾಗಿ ಹೊರರಾಜ್ಯಕ್ಕೆ ಹಣ ಕಳಿಸಿದ ಹಗರಣದ ಕುರಿತು ಘಟನಾವಳಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮಾಧ್ಯಮದ ಸ್ನೇಹಿತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಾಗ ಡೆತ್ ನೋಟ್ ಬರೆಯದೆ ಇದ್ದರೆ ಹಗರಣದ ಚರ್ಚೆ ನಡೆಯುತ್ತಿರಲಿಲ್ಲ. ದಲಿತರಿಗೆ ಆದ ಅನ್ಯಾಯವನ್ನು ಸರಿಪಡಿಸುವ ಕೆಲಸವೂ ನಡೆಯುತ್ತಿರಲಿಲ್ಲ ಎಂದು ತಿಳಿಸಿದರು.
 
 
ಸಿಎಂ ಅವರನ್ನು ಪಾಪಪ್ರಜ್ಞೆ ಕಾಡದಿರಲಿ...
ತಮ್ಮ ಅವಧಿಯಲ್ಲಿ ದಲಿತರಿಗೆ, ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಆಗಿದೆ; ನಾನು ಮುಖ್ಯಮಂತ್ರಿಯಾಗಿ ಅಸಹಾಯಕನಾಗಿ ಕುಳಿತಿದ್ದೆನಲ್ಲವೇ ಎಂಬ ಪಾಪಪ್ರಜ್ಞೆ ಸಿಎಂ ಅವರನ್ನು ಕಾಡಬಾರದು ಎಂದೇ ಈ ವಿಚಾರದ ಕುರಿತು ಗಮನ ಸೆಳೆದಿದ್ದೇವೆ ಎಂದರು. ಹಣ ಪಕ್ಕದ ರಾಜ್ಯಕ್ಕೆ ಹೋದುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವರೂ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. 48 ಗಂಟೆಗಳಲ್ಲಿ 187 ಕೋಟಿ ಹಿಂಪಡೆಯಲಾಗುವುದು ಎಂದೂ ತಿಳಿಸಿದ್ದರು. ಸಚಿವರ ನೇತೃತ್ವದಲ್ಲಿ ಈ ಹಗರಣ ನಡೆದಿರುವುದು ಗೊತ್ತಾಗಿದೆ ಎಂದು ಸಭಾಧ್ಯಕ್ಷರ ಗಮನ ಸೆಳೆದರು.
 
ಅಧಿಕಾರಿಗಳ ಮೇಲೆ ವಾಲ್ಮೀಕಿ ನಿಗಮದ ಹಗರಣದ ಜವಾಬ್ದಾರಿ ಹಾಕಿ, ಆರೋಪ ಹೊರಿಸಿ, ತಮಗೆ ಬೇಕಾದ ಸಚಿವರು, ಶಾಸಕರನ್ನು ರಕ್ಷಿಸುವ ಕೆಲಸ ಸರಕಾರದ ನೇತೃತ್ವದಲ್ಲಿ ನಡೆದಿದೆ.

ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಹೇಳಿಕೆ ಅದಕ್ಕೆ ಪುಷ್ಟಿ ಕೊಡುವಂತಿದೆ ಎಂದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯದ ವಸಂತನಗರ ಶಾಖೆಯಲ್ಲಿ ನಿಗಮದ ಖಾತೆ ಇದ್ದರೂ ಎಂ.ಜಿ. ರೋಡ್ ಶಾಖೆಯಲ್ಲಿ ಹೊಸ ಖಾತೆ ತೆರೆದು 187 ಕೋಟಿ ವರ್ಗಾವಣೆ ಮಾಡಿದ್ದಾರೆ. ಸಚಿವರ ಮೌಖಿಕ ಸೂಚನೆ ಮೇರೆಗೆ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಹಣ ವರ್ಗಾಯಿಸಿದ್ದಾರೆ. ಆತ್ಮಹತ್ಯೆ, ಎಫ್‍ಐಆರ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ನೂರಾರು ಹೊಸ ಖಾತೆ ತೆರೆದು ಹಣ ಡ್ರಾ ಮಾಡಿದ ಹಗರಣದ ಹಣವನ್ನು ಲ್ಯಾಂಬೊರ್ಗಿನಿ ಕಾರು ಖರೀದಿಗೆ, ಬಾರ್‍ಗಳಲ್ಲಿ ಖರ್ಚು ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ 20 ಕೋಟಿಗೂ ಹೆಚ್ಚು ಬಳಸಿದ್ದನ್ನು ಉಲ್ಲೇಖಿಸಿದರು. ನೂರಾರು ಕೋಟಿಯ ಹಗರಣ ಇದಾದ ಕಾರಣ ಸಹಜವಾಗಿಯೇ ಸಿಬಿಐ, ಇ.ಡಿ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
 
 
ಆರ್ಥಿಕ ಶಿಸ್ತು ರೂಪಿಸುವಲ್ಲಿ ಸಿಎಂ ವಿಫಲ..

ಇಷ್ಟು ದೊಡ್ಡ ಹಗರಣದ ಸಂದರ್ಭದಲ್ಲಿ ಅನುಭವಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ನಡವಳಿಕೆಯನ್ನೂ ಜನರು ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ಅವರು ಹೇಳಿದರು. ಮುಖ್ಯಮಂತ್ರಿಗಳು ಆರ್ಥಿಕ ಶಿಸ್ತು ರೂಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಿಎಂ ಅವರಿಗೆ ನಿಜವಾಗಿ ಕಾಳಜಿ ಇದ್ದರೆ, ದಲಿತರು, ಹಿಂದುಳಿದವರು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಈ ನಿಗಮದ ಹಣದ ವಿಚಾರದಲ್ಲಿ ಗಮನ ಕೊಡಬೇಕಿತ್ತು. ಕೊಲೆ ಮಾಡುವುದು ಎಷ್ಟು ಅಪರಾಧವೋ, ಕೊಲೆ ಮಾಡುವುದನ್ನು ನೋಡಿಕೊಂಡು ಸುಮ್ಮನೇ ಕುಳಿತಿರುವುದೂ ಅಪರಾಧವೇ ಆಗಿದೆ. ಇದನ್ನು ರಾಜ್ಯದ ಮುಖ್ಯಮಂತ್ರಿಗಳು ತಿಳಿದುಕೊಳ್ಳಬೇಕು.

ರಾಜ್ಯದ ಜನರು ದಲಿತ ಸಮುದಾಯಕ್ಕೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕೆಂದು ಅಪೇಕ್ಷೆ ಇಟ್ಟುಕೊಂಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ದೋಚಿದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ; ಬೇರೆ ಬೇರೆ ಕಡೆ ದುರುಪಯೋಗ ಆಗಿದೆ ಎಂಬುದು ಜಗಜ್ಜಾಹೀರಾಗಿದೆ ಎಂದು ತಿಳಿಸಿದರು.
 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ