ಮೈಸೂರು: ಯಾವುದೇ ಸಂಘ ಸಂಸ್ಥೆ ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ಮಾಡುವ ಮೊದಲು ಅನುಮತಿ ತೆಗೆದುಕೊಳ್ಳಬೇಕು. ನಾವು ಆರ್‌ಎಸ್‌ಎಸ್‌ನ್ನು ಟಾರ್ಗೆಟ್ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಮುನ್ನ ಅನುಮತಿ ಪಡೆಯಬೇಕು. ಈ ನಿಟ್ಟಿನಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಇದ್ದಾಗಲೇ ಆ ಬಗ್ಗೆ ಸುತ್ತೋಲೆ ಹೊರಡಿಸಿದ್ದರು. ಅದನ್ನು ನಾವೀಗ ಅನುಷ್ಠಾನಕ್ಕೆ ತಂದಿದ್ದೇವೆ. ಅವರು ಕ್ರಮ ಕೈಗೊಂಡಿದ್ದಾಗ ಆರ್‌ಎಸ್‌ಎಸ್‌ನವರು ಏಕೆ ವಿರೋಧಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.
ಈ ವಿಷಯದಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಜನತೆ, ಬಡವರ ಕೆಲಸವನ್ನು ಅವರು ಮಾಡುವುದೇ ಇಲ್ಲ. ಸದಾ ರಾಜಕಾರಣದಲ್ಲಿ ತೊಡಗುವುದೇ ಅದರ ಕೆಲಸ ಎಂದು ದೂರಿದರು.
ಇನ್ನೂ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ನವರು ಹಾಕಿದ್ದ ಬ್ಯಾನರ್, ಭಗವಾಧ್ವಜ ತೆರವುಗೊಳಿಸಿರುವ ವಿಚಾರ ನನಗೆ ತಿಳಿದಿಲ್ಲ. ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯಿಸುತ್ತೇನೆ. ಬಿಜೆಪಿಯಿಂದ ಕರ್ನಾಟಕದಲ್ಲಿ ಶಾಂತಿ ಭಂಗ ಮಾಡಲು ಸಾಧ್ಯವಿಲ್ಲ. ಪೊಲೀಸರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದರು.