ಸಾಲ ಮನ್ನಾಗೆ ಬಿಎಸ್‌ವೈ, ಕರಂದ್ಲಾಜೆ ಸಂಸತ್ತಿನಲ್ಲಿ ಧರಣಿ ನಡೆಸಲಿ: ಸಿಎಂ ಸಿದ್ದರಾಮಯ್ಯ

ಬುಧವಾರ, 15 ಮಾರ್ಚ್ 2017 (17:54 IST)
ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ ಎನ್ನುವ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ನಾವು ಈಗಲೂ ಸಾಲ ಮನ್ನಾ ಮಾಡಲು ಸಿದ್ದರಿದ್ದೇವೆ. ರೈತರ ಸಾಲ ಮನ್ನಾ ಮಾಡುವಂತೆ ಯಡಿಯೂರಪ್ಪ ಕರಂದ್ಲಾಜೆ ಸಂಸತ್ತಿನಲ್ಲಿ ಧರಣಿ ನಡೆಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮೊದಲು ಬಿಜೆಪಿಯವರು ಕೇಂದ್ರ ಸರಕಾರದಿಂದ ರೈತರ ಅರ್ಧ ಸಾಲ ಮನ್ನಾ ಮಾಡಿಸಲಿ. ಅದನ್ನು ಬಿಟ್ಟು ಬರುಡೆ ಬಿಡುವುದು ಬೇಡ. ಕೇವಲ ನಾವು ಸಾಲ ಮನ್ನಾ ಮಾಡುವುದರಿಂದ ಅಂತಹ ಪ್ರಯೋಜನವಾಗುವುದಿಲ್ಲ. ಕೇವಲ ಸಹಕಾರಿ ಬ್ಯಾಂಕ್‌ಗಳ ಸಾಲ ಮನ್ನಾ ಆಗುತ್ತದೆ. ಒಂದು ವೇಳೆ, ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಆಗುತ್ತದೆ ಎಂದು ತಿಳಿಸಿದ್ದಾರೆ.
 
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಆದ್ಯತೆ ಕ್ಷೇತ್ರಗಳಿಗೆ ಮಾಡಿರುವ ವೆಚ್ಚಕ್ಕಿಂತ ನಾವು ಹೆಚ್ಚಿನ ವೆಚ್ಚ ಮಾಡಿದ್ದೇವೆ. ಕೇವಲ ಬೊಗಳೆ ಬಿಡುವುದರಿಂದ ರೈತರ ಪರವಾಗುವುದಿಲ್ಲ. ಬಿಜೆಪಿ ನಾಯಕರಿಗೆ ಬೇಕಾಗಿದ್ದಲ್ಲಿ ಅಂಕಿ ಅಂಶಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸುತ್ತೇನೆ ಎಂದು ಹೇಳಿದ್ದಾರೆ.
 
ಬಿಜೆಪಿ ನಾಯಕರಿಗೆ ನಿಜವಾಗಿಯೂ ರೈತರ ಕಾಳಜಿಯಿದ್ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸಂಸತ್ತಿನಲ್ಲಿ ಧರಣಿ ಕುಳಿತು ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿ ಮೋದಿಯವರಿಗೆ ಒತ್ತಾಯಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ