ಷರತ್ತುಬದ್ಧ ಜಾಮೀನು ಪಡೆದ ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಬಂಧನದ ಭೀತಿ

Sampriya

ಶನಿವಾರ, 23 ಆಗಸ್ಟ್ 2025 (20:25 IST)
ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದ ಮಹೇಶ್‌ ಶೆಟ್ಟಿ ತಿಮರೋಡಿ ಅವರಿಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮಹೇಶ್‌ ಶೆಟ್ಟಿ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಇಂದು ಉಡುಪಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಈ ಪ್ರಕರಣದಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಬಂಧನವಾಗುವ ಸಾಧ್ಯತೆಯಿದೆ.  ಅನನ್ಯಾ ಭಟ್‌ ನಾಪತ್ತೆ ಕಥೆ ಕಟ್ಟಿದ್ದ ಸುಜಾತಾ ಭಟ್‌ ಅವರ ಮುಖವಾಡ ಕಳಚಿದ್ದು, ತಾನು ಮಹೇಶ್ ತಿಮರೋಡಿ ಮನೆಯಲ್ಲಿ ನಾಲ್ಕು ದಿನಗಳ ಕಾಲ ನಾನು ಇದ್ದಿದ್ದು ನಿಜ ಎಂದು ಆಕೆ ಹೇಳಿಕೆ ನೀಡಿದ್ದು, ಇದರಲ್ಲಿ ಮತ್ತೆ ತಿಮರೋಡಿ ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ. ಮತ್ತೊಂದೆಡೆ ಮಾಸ್ಕ್‌ಮ್ಯಾನ್‌ನನ್ನು ಸಿಐಟಿ ಪೊಲೀಸರು ಬಂಧಿಸಿದ್ದು, ಆತ ವಿಚಾರಣೆ ವೇಳೆ ನೀಡಿರುವ ಹೇಳಿಕೆ ತಿಮರೋಡಿ ಅವರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಡುಪಿ ನ್ಯಾಯಾಲಯದಲ್ಲಿ  ಮಹೇಶ್ ಶೆಟ್ಟಿ ತಿಮರೋಡಿ ಪರ ವಾದ ಮಂಡಿಸಿದ ವಕೀಲರು, ಬಂಧಿಸಿದ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ. ಪ್ರಥಮ ನೋಟಿಸ್ ನೀಡಿ ಅದರ ಅವಧಿ ಮುಗಿಯುವ ಮುನ್ನವೇ ಎರಡನೇ ನೋಟಿಸ್ ನೀಡಿದ್ದಾರೆ. ತಿಮರೋಡಿಯವರ ಹೇಳಿಕೆಯಿಂದ ಯಾವುದೇ ಕೋಮು ಗಲಭೆಗಳು ಆಗಿಲ್ಲ. ತಿಮರೋಡಿ ಕೂಡ ಓರ್ವ ಹಿಂದೂ ನಾಯಕ. ಇನ್ನೊಂದು ಧರ್ಮವನ್ನು ಅವರು ದೂಷಿಸಿಲ್ಲ ಎಂದು ಹೇಳಿದರು.

ಈ ವೇಳೆ ಪ್ರತಿವಾದಿಗಳಿಂದ ಆಕ್ಷೇಪ ಮಾಡಲಾಯಿತು. ಆದರೆ, ವಾದ ವಿವಾದ ಆಲಿಸಿದ ನ್ಯಾಯಾಧೀಶ ನಾಗೇಶ್, ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಜಾಮೀನು ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ