ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿಕೆ ಸುರೇಶ್ ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ಮೊದಲು ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಸಾಥ್ ನೀಡಿದ್ದಾರೆ. ಈ ವೇಳೆ ಎದುರಾಳಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮಾಧ್ಯಮಗಳು ಪ್ರಶ್ನಿಸಿದವು.
ಬಿಜೆಪಿಯಿಂದ ಹೃದಯ ತಜ್ಞ ಡಾ ಸಿಎನ್ ಮಂಜುನಾಥ್ ಕಣಕ್ಕಿಳಿದಿದ್ದಾರೆ. ಜನ ಈ ಬಾರಿ ಹೃದಯ ನೋಡಿ ವೋಟ್ ಹಾಕಲಿದ್ದಾರೆ ಎಂಬ ಮಾತಿದೆ ಎಂಬ ಬಗ್ಗೆ ಕೇಳಿದಾಗ ಸಿಎಂ ಸಿದ್ದು ಯಾವ ಹೃದಯ ರೀ? ಡಾ ಸಿಎನ್ ಮಂಜುನಾಥ್ ಸರ್ಕಾರಿ ಕೆಲಸದಲ್ಲಿದ್ದವರು. ಈಗ ನಿವೃತ್ತರಾಗಿ ರಾಜಕಾರಣಕ್ಕೆ ಬಂದಿದ್ದಾರೆ. ಅದೇ ಡಿಕೆ ಸುರೇಶ್ ಹಗಲು ರಾತ್ರಿ ಎನ್ನದೇ ಈ ಕ್ಷೇತ್ರಕ್ಕಾಗಿ ದುಡಿದಿದ್ದಾರೆ. ಅವರು ಖಂಡಿತಾ ಗೆಲ್ಲುತ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ನುಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಡಿಕೆ ಸುರೇಶ್ ಇಷ್ಟು ಸಮಯ ಸಂಸತ್ತಿನ ಹೊರಗೆ, ಒಳಗೆ ಈ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಜನ ಅವರ ಕೆಲಸ ನೋಡಿ ಖಂಡಿತವಾಗಿಯೂ ವೋಟ್ ಹಾಕುತ್ತಾರೆ ಎಂದು ಸಿಎಂ ಹೇಳಿದ್ದಾರೆ.