ಸಿಎಂ ಸಿದ್ದರಾಮಯ್ಯಗೆ ಅನಾರೋಗ್ಯ, ಆಸ್ಪತ್ರೆಗೆ ದೌಡು

Krishnaveni K

ಭಾನುವಾರ, 2 ಫೆಬ್ರವರಿ 2025 (12:31 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಈ ಹಿನ್ನಲೆಯಲ್ಲಿ ಅವರು ಇಂದು ಬೆಳಿಗ್ಗೆಯೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಮೊದಲಿನಿಂದಲೂ ವಯೋಸಹಜವಾದ ಮಂಡಿ ನೋವಿನ ಸಮಸ್ಯೆಯಿದೆ. ಇದೀಗ ಅವರಿಗೆ ಮಂಡಿ ನೋವು ಉಲ್ಬಣಿಸಿದೆ. ಈ ಹಿನ್ನಲೆಯಲ್ಲಿ ಅವರು ಇಂದು ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಸಿದ್ದರಾಮಯ್ಯರನ್ನು ತಪಾಸಣೆ ನಡೆಸಿದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಎರಡು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಸಿಎಂ ಇನ್ನು ಎರಡು ದಿನಗಳ ಕಾಲ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲ್ಲ ಎಂದು ತಿಳಿದುಬಂದಿದೆ.

ಎಲ್ಲಾ ಸರಿ ಹೋಗಿದ್ದರೆ ಸಿಎಂ ಇಂದು ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಶಾಲೆಯ ಕಾರ್ಯಕ್ರಮ ಮತ್ತು ರಾಮನಗರದಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿತ್ತು. ಆದರೆ ಮಂಡಿನೋವಿನಿಂದಾಗಿ ಅವರ ಕಾರ್ಯಕ್ರಮಗಳು ದಿಡೀರ್ ಆಗಿ ರದ್ದಾಗಿದೆ.

ಈ ಹಿಂದೆ ಸಿಎಂ ಸಿದ್ದರಾಮಯ್ಯ ಲೆಗಮೆಂಟ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈಗ ಅದೇ ಜಾಗದಲ್ಲಿ ಮತ್ತೆ ಮಂಡಿನೋವು ಕಾಣಿಸಿಕೊಂಡಿದೆ. ಹೀಗಾಗಿ ಎರಡು ದಿನಗಳ ಕಾಲ ಪ್ರಯಾಣ ಮಾಡದೇ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ