ಕಾಫಿನಾಡಲ್ಲಿ ಸ್ಕಾರ್ಫ್, ಕೇಸರಿ ಶಲ್ಯ ವಿವಾದ – ಪೋಷಕರ ಸಭೆಯಲ್ಲಿ ಇತ್ಯರ್ಥ

ಮಂಗಳವಾರ, 11 ಜನವರಿ 2022 (21:00 IST)
ಚಿಕ್ಕಮಗಳೂರು: ಕಳೆದ ಎಂಟತ್ತು ದಿನಗಳಿಂದ ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಲೆದೂರಿದ್ದ ಕೇಸರಿ ಶಲ್ಯ ಹಾಗೂ ಸ್ಕಾರ್ಫ್ ವಿವಾದಕ್ಕೆ ಶಾಂತಿಯುತ ತೆರೆಬಿದ್ದಿದೆ.
ಕಾಲೇಜಿನ ಪ್ರಾಂಶುಪಾಲರು ಸೋಮವಾರ ಕಾಲೇಜಿನಲ್ಲಿ ಪೋಷಕರ ಸಭೆ ಕರೆದಿದ್ದರು. ಪೋಷಕರ ಸಭೆಯಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ತರಗತಿಯ ಒಳಗೆ ಸ್ಕಾರ್ಫ್ ಧರಿಸುವಂತಿಲ್ಲ, ತಲೆಯ ಮೇಲೆ ವೇಲ್ ಹಾಕಿಕೊಳ್ಳಲು ಅಷ್ಟೇ ಅವಕಾಶ. ವೇಲ್‌ನ್ನು ಪಿನ್‌ಗಳಿಂದ ಸುತ್ತಿ ಕಟ್ಟುವಂತಿಲ್ಲ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.
ಪೋಷಕರ ಸಭೆಯಲ್ಲಿ ಪ್ರಾಂಶುಪಾಲ ಅನಂತ್ ಮಾತನಾಡಿ, 2018ರಲ್ಲೂ ಇದೇ ವಿವಾದ ತಲೆದೂರಿತ್ತು. ಆಗ ಅಂದಿನ ಸಭೆಯಲ್ಲಿ ತಲೆಯ ಮೇಲೆ ವೇಲ್ ಮಾತ್ರ ಹಾಕಿಕೊಳ್ಳಲು ಅವಕಾಶವಿದೆ ಎಂದು ಅಂದಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಬಾರಿಯೂ ಮತ್ತದೆ ಸಮಸ್ಯೆ ಎದುರಾಗಿದೆ. ಹಾಗಾಗಿ, ಈ ಸಲ ತಮ್ಮೆಲ್ಲರ ಅಭಿಪ್ರಾಯ ಪಡೆದು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು ಕ್ರಮ ಉಲ್ಲಂಘಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು. ಯಾವ ವಿದ್ಯಾರ್ಥಿಯಾದರು ಇಂದಿನ ತೀರ್ಮಾನಗಳಿಗೆ ತದ್ವಿರುದ್ಧವಾಗಿ ನಡೆದುಕೊಂಡರೇ ಪೋಷಕರನ್ನು ಕರೆಸಿ ವರ್ಗಾವಣೆ ಪತ್ರ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ರಾಜೇಗೌಡ, ವಿದ್ಯಾರ್ಥಿಗಳು ಕಲಿಕೆಗೆ ಅಷ್ಟೇ ಆದ್ಯತೆ ನೀಡಬೇಕು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು. ಕಾಲೇಜಿನಲ್ಲಿ ಭಾವನೆಗಳನ್ನ ಕೆರಳಿಸುವ ಕೆಲಸ ಆಗಬಾರದು ಎಂದರು.
ಅನ್ಯ ಕೋಮಿನ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರುವುದರಿಂದ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಕೇಸರಿ ಶಲ್ಯ ಹಾಕಿಕೊಂಡು ಬರುತ್ತಿದ್ದರು. ಕಳೆದೊಂದು ವಾರದ ಹಿಂದೆ ಸ್ಕಾರ್ಫ್ ವಿರುದ್ಧ ವಿದ್ಯಾರ್ಥಿಗಳು ಸ್ಕಾರ್ಫ್ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದರು. ಇಂದು ಕಾಲೇಜಿನ ಪ್ರಾಚಾರ್ಯರು ಪೋಷಕರು ಸಭೆ ಕರೆದು ಈ ನಿರ್ಧಾರಕ್ಕೆ ಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ