ಕುಸಿದ ಕಟ್ಟಡದ ಪ್ರದೇಶ ಸಂಪೂರ್ಣ ಪಾಲಿಕೆ ವಶಕ್ಕೆ: ಸಮರೋಪಾದಿಯಲ್ಲಿ ನೆಡೆಯುತ್ತಿರುವ ತೆರವು ಕಾರ್ಯ

ಸೋಮವಾರ, 27 ಸೆಪ್ಟಂಬರ್ 2021 (21:18 IST)
ಬೆಂಗಳೂರು: ಲಕ್ಕಸಂದ್ರದಲ್ಲಿ ಏಕಾಕೇಕಿ ಬಿಲ್ಡಿಂಗ್  ಕುಸಿದು ಬಿದ್ದ ಪರಿಣಾಮ ನಗರದ ಜನತೆ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಪಾಲಿಕೆ ಸ್ಪಷ್ಟನೆ ನೀಡಿದ್ದು, ಯಾವದೇ ಆಸ್ತಿ ಪಾಸ್ತಿ ಪ್ರಾಣಹಾನಿ  ಸಂಭವಿಸಿಲ್ಲ. ಸಂಪೂರ್ಣ ಕಟ್ಟಡವನ್ನು ವಶಕ್ಕೆ ಪಡೆಯಲಾಗಿದ್ದು ಅವಶೇಷಗಳ ತೆರವು ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ ಎಂದು ತಿಳಿಸಿದೆ.   
 
ನಗರದ ಲಕ್ಕಸಂದ್ರದಲ್ಲಿ ಇದ್ದಕ್ಕಿದ್ದಂತೆ 3 ಮಹಡಿ ಕಟ್ಟಡ  1962ರಲ್ಲಿ ನಿರ್ಮಿಸಲಾಗಿತ್ತು.  ಈ ಕಟ್ಟಡದಲ್ಲಿ ಬಹುತೇಕ ಮೆಟ್ರೋ ಕಾಮಗಾರಿಯಲ್ಲಿ ಕೆಲಸದಲ್ಲಿರುವ  ಕಾರ್ಮಿಕರು ವಾಸಿಸುತ್ತಿದ್ದರು. ಬೆಳಗ್ಗೆ ಕಟ್ಟಡ ವಾಲಿದ್ದರಿಂದ ಅದರಲ್ಲಿದ್ದ 70 ಕಾರ್ಮಿಕರನ್ನು ತೆರವು ಮಾಡಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನೆ ಎದುರೇ ಈ ಘಟನೆ ನೆಡೆದಿತ್ತು. 
 
ಈ ಕುರಿತು ಪಾಲಿಕೆ ವಿವರವಾದ ಸ್ಪಷ್ಟನೆ ನೀಡಿದ್ದು ಬಿಬಿಎಂಪಿ ದಕ್ಷಿಣ ವಲಯದ ವಾರ್ಡ್ ಸಂಖ್ಯೆ 145ರ ವ್ಯಾಪ್ತಿಯ 7ನೇ ಮುಖ್ಯರಸ್ತೆ, 15ನೇ ಕ್ರಾಸ್, ಲಕ್ಕಸಂದ್ರದಲ್ಲಿ ಸುಮಾರು 70 ವರ್ಷಗಳ ಹಳೆಯ ಶಿಥಿಲಾವ್ಯವಸ್ಥೆಯಲ್ಲಿರುವ 3 ಅಂತಸ್ತಿನ ಕಟ್ಟಡ ಬೆಳಿಗ್ಗೆ ಸುಮಾರು 10. 30 ರ ಸಮಯದಲ್ಲಿ ಕುಸಿದು ಬಿದ್ದಿದೆ. ಖಾಲಿ ಇರುವ ಕಟ್ಟಡವನ್ನು ಮೆಟ್ರೋ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರುಗಳಿಗೆ ಬಾಡಿಗೆಗೆ ಕಟ್ಟಡದ ಮಾಲೀಕ ನೀಡಿದ್ದ. ಮೆಟ್ರೋ ಕಾಮಗಾರಿಯ ಕಾರ್ಮಿಕರುಗಳು ಕೆಲಸಕ್ಕೆ ಹೋಗಿದ್ದರಿಂದ ಮತ್ತು  ಕಟ್ಟಡದಲ್ಲಿ ಬಹುತೇಕ ಕಾರ್ಮಿಕರು ಇಲ್ಲದೇ ಇದ್ದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಯಾವುದೇ ಆಸ್ತಿ-ಪ್ರಾಸ್ತಿಗೆ ಹಾನಿ ಸಂಭವಿಸಿಲ್ಲ.  ಸುತ್ತಮುತ್ತಲಿನ ಸಾರ್ವಜನಿಕರಿಗೆ ಕೂಡ  ಯಾವುದೇ ತೊಂದರೆಯಾಗಿಲ್ಲ ಎಂದಿದೆ.
 
ಪೊಲೀಸ್ ಠಾಣೆಗೆ ದೂರು: 
 
ಸ್ಥಳಕ್ಕೆ ಶಾಸಕ ಉದಯ್ ಗರುಡಾಚಾರ್ ಭೇಟಿ ನೀಡಿ ತಪಾಸಣೆ ಮಾಡಿದ್ದಾರೆ. ಈ  ಕಟ್ಟಡದ ಮಾಲೀಕ ಸುರೇಶ್  ಶಿಥಿಲಾವ್ಯವಸ್ಥೆಯಲ್ಲಿರುವ ಕಟ್ಟಡವನ್ನು 50-60 ಜನರಿಗೆ ವಾಸ್ತವ್ಯ ಮಾಡಲು ಬಾಡಿಗೆಗೆ ನೀಡಿ ಪ್ರಾಣಹಾನಿಗೆ ಕಾರಣ ಆಗುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಇದೀಗ ಪೊಲೀಸರು ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ  ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 
 
ರಾತ್ರಿ ಕುಸಿದಿದ್ದರೆ 50 ಕ್ಕೂ ಹೆಚ್ಚು ಜನರ ಸಾವು: 
 
ವಿಲ್ಸನ್​​ ಗಾರ್ಡನ್​​​ ಬಳಿಯ ಲಕ್ಕಸಂದ್ರದ 7ನೇ ಮುಖ್ಯ ರಸ್ತೆ, 15ನೇಯ  ಅಡ್ಡ ರಸ್ತೆಯಲ್ಲಿದ್ದ ಈ ಕಟ್ಟಡದ 1962ರಲ್ಲಿ ನಿರ್ಮಿಸಲಾಗಿತ್ತು. ಸುರೇಶ್ ಎಂಬುವವರಿಗೆ ಸೇರಿದ ಈ ಕಟ್ಟಡದಲ್ಲಿ ಮೆಟ್ರೋ ಕಾರ್ಮಿಕರು ವಾಸವಾಗಿದ್ದರು. ಕಟ್ಟಡ ವಾಲಿದ ಹಿನ್ನೆಲೆಯಲ್ಲಿ  ಬೆಳಗ್ಗೆ ಕಾರ್ಮಿಕರನ್ನು ಕಟ್ಟಡದಿಂದ ತೆರವು ಮಾಡಲಾಗಿತ್ತು. ಮುಂಜಾಗ್ರತೆಯಿಂದ ಕಾರ್ಮಿಕರನ್ನು ಮೊದಲೇ ತೆರವು ಮಾಡಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿತ್ತು.  ಈ  ಮೂರು ಆಂತಸ್ತಿನ ಕಟ್ಟಡದಲ್ಲಿ ಸುಮಾರು 70 ಮಂದಿ ಕಾರ್ಮಿಕರು ವಾಸವಿದ್ದರು. ಅಕಸ್ಮಾತ್ ಕಟ್ಟಡ ರಾತ್ರಿ ವೇಳೆ ಕುಸಿದಿದ್ದರೆ 50 ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪುವ ಸಾಧ್ಯತೆ ಇತ್ತು ಎನ್ನುವ ಆತಂಕ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ