ಮದುವೆಗೆ ಬಂದವರು ಮಸಣಕ್ಕೆ!

ಮಂಗಳವಾರ, 17 ಮೇ 2022 (08:44 IST)
ಗದಗ : ಕುರಿ ಮೇಯಿಸಲು ಹೋದ ಐವರು ಬಾಲಕಿಯರಲ್ಲಿ ಮೂವರು ಕೃಷಿ ಹೊಂಡದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.

5 ಬಾಲಕಿಯರು ಒಟ್ಟಾಗಿ ಕುರಿ ಮರಿಗಳನ್ನು ಮೇಯಿಸಲು ಊರ ಪಕ್ಕಕ್ಕೆ ಹೋಗಿದ್ದರು. ಈ ವೇಳೆ ಜಮೀನಿನಲ್ಲಿದ್ದ ಕೃಷಿ ಹೊಂಡ ನೋಡಿ ನೀರು ಕುಡಿಯಲು ಹೋದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಅಂಕಿತಾ ಲಮಾಣಿ(13), ಸುನಿತಾ ಲಮಾಣಿ(11) ಹಾಗೂ ಸುನಿತಾ(10) ಮೃತ ಬಾಲಕಿಯರು.

ಬಾಲಕಿಯರು ಗೋವಾದಲ್ಲಿ ವಾಸವಿದ್ದರು. 22ರಂದು ನಡೆಯಲಿದ್ದ ಚಿಕ್ಕಪ್ಪನ ಮದುವೆ ಸಲುವಾಗಿ ಪಾಲಕರೊಂದಿಗೆ ಅತ್ತಿಕಟ್ಟಿ ಗ್ರಾಮಕ್ಕೆ ಬಂದಿದ್ದರು. ಮೃತ ಬಾಲಕಿಯರಲ್ಲಿ ಅಂಕಿತಾ ಹಾಗೂ ಸುನಿತಾ ಸಹೋದರಿಯರು.

ಮತ್ತೋರ್ವ ಮೃತ ಬಾಲಕಿ ಸುನಿತಾ ಡೋಣಿ ತಾಂಡ ನಿವಾಸಿ. ಮದುವೆ ಮನೆಯಲ್ಲಿ ಒಟ್ಟಾಗಿದ್ದ ಬಾಲಕಿಯರು ಒಟ್ಟಾಗಿ ಸಂಜೆ ಕುರಿ ಮರಿಗಳನ್ನು ಮೇಯಿಸಲು ಹೋಗಿದ್ದರು.

ಸ್ಥಳೀಯ ಬಸವರಾಜ್ ಲಮಾಣಿ ಎಂಬವರ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಮಕ್ಕಳು ಇಳಿದಿರುವುದನ್ನು ಚಿಕ್ಕಪ್ಪ ಗೋವಿಂದ ಲಮಾಣಿ ನೋಡಿದ್ದಾರೆ. ಸ್ಥಳಕ್ಕೆ ಬಂದಾಗ ಮಕ್ಕಳು ನೀರಲ್ಲಿ ಮುಳುಗಿದ್ದು ತಿಳಿದಿದೆ. ಈ ವೇಳೆ ಇಬ್ಬರನ್ನು ರಕ್ಷಣೆ ಮಾಡಿದ್ದು, ಉಳಿದ ಬಾಲಕಿಯರು ಮುಳುಗಿರುವುದನ್ನು ಕುಟುಂಬಸ್ಥರಿಗೆ ಹಾಗೂ ಸ್ಥಳೀಯರಿಗೆ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ