ಕಾವೇರಿ ವಿಷಯ ಕುರಿತು ಸಮರ್ಥವಾಗಿ ವಾದ ಮಂಡಿಸಲು ನ್ಯಾಯವಾದಿ ಫಾಲಿ ನಾರಿಮನ್ ಸಂಪೂರ್ಣವಾಗಿ ವಿಫಲರಾಗಿದ್ದು, ಅವರ ಬದಲಾಗಿ ಬೇರೊಬ್ಬ ಸಮರ್ಥ ನ್ಯಾಯವಾದಿಯನ್ನು ನೇಮಿಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಷಯದ ಕುರಿತು ರಾಜ್ಯಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇದೆ. ಕಾವೇರಿ ಜಲಾಶಯದಲ್ಲಿ ನೀರಿಲ್ಲ ಎನ್ನುವ ವಾಸ್ತವಾಂಶ ತಿಳಿದಿದ್ದರೂ ನಾರಿಮನ್, ಸೆ. 5ರಂದು ನಡೆದ ವಿಚಾರಣೆಯಲ್ಲಿ 10ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ನ್ಯಾಯಾಲಯಕ್ಕೆ ಅಂಡರ್ ಟೇಕಿಂಗ್ ನೀಡಿದ್ದಾರೆ. ಅಂದು ಅವರು ಕೈಗೊಂಡಿರುವ ಏಕಪಕ್ಷೀಯ ನಿರ್ಧಾರದಿಂದ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಎಂದರು.
ವಾದ ಮಾಡಲು ತಾನು ಅಸಮರ್ಥ ಎಂದು ಅರಿವಾದಾಗ ನ್ಯಾಯಾಲಯದಲ್ಲಿ ಇನ್ನು ಮುಂದೆ ವಾದ ಮಂಡಿಸಲಾರೆ ಎಂದು ಹೇಳುತ್ತಾರೆ. ಅವರನ್ನು ಮುಂದುವರಿಸಬೇಕೋ ಬೇಡವೋ ಎನ್ನುವ ವಿಷಯ ಕಕ್ಷಿದಾರನಾದ ಸರಕಾರಕ್ಕೆ ಬಿಟ್ಟಿದ್ದು. ಆದರೆ, ಅದ್ಯಾವುದನ್ನು ಪರಿಗಣಿಸದೆ ನ್ಯಾಯಾಲಯದಲ್ಲಿ ಅವರು ಹಿಂದೆ ಸರಿಯುವ ವಿಷಯ ಪ್ರಸ್ತಾಪಿಸಿದ್ದು, ವೃತ್ತಿಪರತೆಗೆ ಮಾಡಿರುವ ದ್ರೋಹ. ಏನೇ ಇರಲಿ, ಈ ಕೂಡಲೇ ರಾಜ್ಯ ಸರಕಾರ ಸಮರ್ಥ ನ್ಯಾಯವಾದಿಯನ್ನು ನೇಮಕ ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದ ಶೆಟ್ಟರ್, ಅ. 6ರವರೆಗೆ ಪ್ರತಿದಿನ 6ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ನ್ಯಾಯಾಲಯ ಮತ್ತೆ ಆದೇಶಿಸಿದ ಹಿನ್ನೆಲೆಯಲ್ಲಿ ದಿ. 3ರಂದು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.