ಸಚಿವ ನಾಗೇಶ್ ವಿರುದ್ಧ ಕಾಂಗ್ರೆಸ್ ದೂರು

ಶುಕ್ರವಾರ, 12 ಆಗಸ್ಟ್ 2022 (17:29 IST)
ತ್ರಿವರ್ಣ ಧ್ವಜಕ್ಕಿಂತ ಮೇಲೆ ಎಬಿವಿಪಿ‌ ಧ್ವಜ ಹಿಡಿದು ಶಿಕ್ಷಣ ಸಚಿವ ಬಿ.ಸಿ ‌ನಾಗೇಶ್ ಮೆರವಣಿಗೆಯಲ್ಲಿ ಸಾಗಿದ್ದಾರೆಂಬ ವಿಷಯ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಈ ಕುರಿತಂತೆ ಸಚಿವರ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿಪಟೂರು ಪೊಲೀಸ್ ಠಾಣೆಯಲ್ಲಿ‌ ದೂರು ನೀಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ತ್ರಿವರ್ಣಧ್ವಜ ಯಾತ್ರೆಗೆ ಸಾವಿರಾರು ಮಕ್ಕಳು ಪಾಲ್ಗೊಂಡಿದ್ದರು. 180 ಅಡಿ ಉದ್ದದ ತಿರಂಗ ಯಾತ್ರೆಯಲ್ಲಿ ಶಿಕ್ಷಣ ಸಚಿವ ನಾಗೇಶ್ ಅವರು ಪಾಲ್ಗೊಂಡಿದ್ದರು. ಈ ಮೆರವಣಿಗೆಯಲ್ಲಿ‌ ರಾಷ್ಟ್ರಧ್ವಜಕ್ಕಿಂತ ಮೇಲೆ ಎಬಿವಿಪಿ ಧ್ವಜವನ್ನು ಹಿಡಿದು ಸಚಿವ ನಾಗೇಶ್ ಮೆರವಣಿಗೆ ಎದುರು ಸಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ರಾಷ್ಟ್ರದ್ರೋಹಕ್ಕೆ ಸಮನಾದ ಅಪರಾಧವಾಗಿದೆ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ‌ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್​ನಿಂದ ದೂರು ನೀಡಲಾಗಿದೆ ಎಂದು ಕಾಂಗ್ರೆಸಿಗರು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲಿಯೂ ವಿರೋಧ ವ್ಯಕ್ತವಾಗಿದೆ. ರಾಷ್ಟ್ರಧ್ವಜಕ್ಕಿಂತ ಮೇಲೆ‌‌ ಎಬಿವಿಪಿ ಬಾವುಟ ಹಿಡಿದಿರುವುದು ತಪ್ಪು. ಶಿಕ್ಷಣ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ಹೀಗೆ ಮಾಡಿದರೆ ಹೇಗೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಚಿವರು ಭಾಗಿಯಾಗಿರುವ ಕಾರ್ಯಕ್ರಮದ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದ್ರೆ ಅವರು ಎಬಿವಿಪಿ ಧ್ವಜ ಹಿಡಿಯದೇ ಇರೋದು ಸ್ಪಷ್ಟವಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ