ಬೆಂಗಳೂರು : ಡಿಸೇಲ್ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಿಎಂಟಿಸಿ ತನ್ನ ರಜತ ಮಹೋತ್ಸವದ ಸಂದರ್ಭದಲ್ಲಿ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿದೆ.
ಬಿಎಂಟಿಸಿಯೂ ಕೇಂದ್ರ ಸರ್ಕಾರದ ಫೇಮ್ 2ನಲ್ಲಿ 300ಕ್ಕೂ ಹೆಚ್ಚು ಬಸ್ಗಳನ್ನು ರಸ್ತೆಗಿಳಿಸಲಿದ್ದು, ನಗರದಾದ್ಯಂತ ಮತ್ತಷ್ಟು ಎಲೆಕ್ಟ್ರಿಕ್ ಬಸ್ಗಳ ಸಂಚಾರ ಆರಂಭವಾಗಲಿದೆ.
ಕಳೆದ ಹಲವು ದಿನಗಳಿಂದ ನಷ್ಟದ ಸುಳಿಯಲ್ಲಿದ್ದ ಬಿಎಂಟಿಸಿಗೆ, ಡಿಸೇಲ್ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಾಂತಾಗಿತ್ತು. ಇದರ ನಡುವೆ ತೈಲ ಪೂರೈಕೆ ಮಾಡುತ್ತಿದ್ದ ಚಿಲ್ಲರೆ ವ್ಯಾಪಾರಿಗಳಿಗೂ ಸರಿಯಾದ ಹಣ ನೀಡದ ಕಾರಣ ಕೆಲ ದಿನ ಇಂಧನ ಪೂರೈಕೆ ಸ್ಥಗಿತಗೊಳಿಸಿದ್ದರು. ಈ ವೇಳೆ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದ ನಗರ ಸಂಚಾರ ನಾಡಿ ಇನ್ಮುಂದೆ ಈ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿಯೇ ಕಾಕತಾಳೀಯ ಎಂಬಂತೆ ಬಿಎಂಟಿಸಿಯ ರಜತ ಮಹೋತ್ಸವ ಸಹ ಬಂದಿದೆ. ರಜತ ಮಹೋತ್ಸವದ ಸಂಭ್ರಮದಲ್ಲೇ ಬಿಎಂಟಿಸಿಯೂ ಕೇಂದ್ರ ಸರ್ಕಾರದ ಫೇಮ್ 2 ಅಡಿ 300 ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸುತ್ತಿದೆ. ಇದೇ ಆಗಸ್ಟ್ 15ಕ್ಕೆ 75 ಬಸ್ಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಇನ್ನೊಂದು ತಿಂಗಳಲ್ಲಿ ಉಳಿದ 230 ಬಸ್ ಗಳ ಸೇವೆ ಸಿಗಲಿದೆ.