ಹುಬ್ಬಳ್ಳಿ : ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜವಬ್ದಾರಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಹತ್ತಿರ ಬಂದಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮಾನ್ಸೂನ್ ಮಳೆ ತಡವಾಗಿದ್ದರಿಂದ ಬಿತ್ತನೆ ಕೂಡ ತಡವಾಗಿ ಆಗುತ್ತಿದೆ.
ಮಾನ್ಸೂನ್ ಮಳೆ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಸಹ ಬರುತ್ತಿವೆ. ಹೀಗಿದ್ದರೂ ಸಿಎಂ ಇವುಗಳನ್ನು ನಿಭಾಯಿಸಲು ಯಾವುದೇ ರೀತಿ ಸನ್ನದ್ಧವಾಗಿಲ್ಲ ಎಂದರು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿರುವ ಡ್ಯಾಂ ಗಳ ನೀರು ಅತ್ಯಂತ ಕೆಳಮಟ್ಟದಲ್ಲಿದೆ. ಆದರೆ ನಾನು ಇಷ್ಟು ಬೇಗ ರಾಜ್ಯದಲ್ಲಿ ಬರಗಾಲ ಬರಲಿದೆ ಎಂದು ಹೇಳುವುದಿಲ್ಲ. ಆದರೆ ರಾಜ್ಯ ಸರ್ಕಾರ ಸಮರ್ಪಕವಾಗಿ ಯೋಜನೆಗಳನ್ನು ಮಾಡಿಕೊಳ್ಳಬೇಕು.
ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಅದರಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ, ಅವರಿಂದ ಸಹಕಾರ ಪಡೆಯಬೇಕು. ಈ ಕೂಡಲೇ 100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು. ಎನ್ಡಿಆರ್ಎಫ್ ತಂಡಗಳನ್ನು ಚುರುಕುಗೊಳಿಸಬೇಕು.