ಮತ್ತೇ ನಾಲ್ಕು ವರ್ಷ ಆದ್ಮೇಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ: ಸಚಿವ ರಾಮಲಿಂಗ ರೆಡ್ಡಿ

Sampriya

ಶನಿವಾರ, 24 ಆಗಸ್ಟ್ 2024 (20:00 IST)
Photo Courtesy X
ಬೆಂಗಳೂರು:   "ಕುಮಾರಸ್ವಾಮಿ ಒಬ್ಬರೇ ಅಲ್ಲ ಬಿಜೆಪಿಯ ವಿಜಯೇಂದ್ರ ಅವರು ಆರು ತಿಂಗಳಲ್ಲಿ ಸರ್ಕಾರವನ್ನು ಬೀಳಿಸಬೇಕು ಎಂದು ತೊಂದರೆ ಕೊಟ್ಟರು, ಇದು ಆಗದ ಕೆಲಸ. ಅವರು ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಪ್ರಬಲವಾಗಿದ್ದಾರೆ. ಮತ್ತೆ ನಾಲ್ಕು ವರ್ಷ ಆದಮೇಲೆ ಚುನಾವಣೆ ಬರುತ್ತದೆ. ಆಗಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ" ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಹೈಕಮಾಂಡ್ ಭೇಟಿಯ ವಿಚಾರ ಕೇಳಿದಾಗ "ಶುಕ್ರವಾರ ಸಿಎಂ, ಡಿಸಿಎಂ ಹೈಕಮಾಂಡ್ ಭೇಟಿ ಮಾಡಿ ಮುಡಾ, ವಾಲ್ಮೀಕಿ ಆರೋಪಗಳ ನಂತರ  ಒಂದು ತಿಂಗಳಲ್ಲಿ ಯಾವ, ಯಾವ ಬೆಳವಣಿಗೆ ಆಗಿದೆ ಎಂದು ಮಾಹಿತಿ ನೀಡಿರಬಹುದು. ಬಿಜೆಪಿ, ಜೆಡಿಎಸ್ ಷಡ್ಯಂತ್ರದ ಬಗ್ಗೆ, ರಾಜ್ಯಪಾಲರ ನಡೆಯ‌ ಬಗ್ಗೆ ಚರ್ಚೆಯಾಗಿರುತ್ತದೆ" ಎಂದು ತಿಳಿಸಿದರು.

ರಾಷ್ಟ್ರಪತಿಗಳನ್ನು ಭೇಟಿ ಮಾಡುವ ವಿಚಾರದ ಬಗ್ಗೆ ಕೇಳಿದಾಗ "ರಾಜ್ಯಪಾಲರ ನಡೆಯ ಬಗ್ಗೆ ರಾಷ್ಟ್ರಪತಿಗಳ ಗಮನ ಸೆಳೆಯಬೇಕು ಎಂದು ಶಾಸಕಾಂಗ ಸಭೆಯಲ್ಲಿ ಚರ್ಚೆಯಾಯಿತು. ನಮ್ಮ ಒಂದಷ್ಟು ಶಾಸಕರು ಈ ಬಗ್ಗೆ ಅಭಿಪ್ರಾಯ ತಿಳಿಸಿದರು. ಇದನ್ನು ನಾವು ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ನಾವು ನಡೆದುಕೊಳ್ಳಬೇಕಾಗುತ್ತದೆ" ಎಂದರು.

"ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದೇ ರೀತಿಯ ಹುನ್ನಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಜ್ಯಪಾಲರ ಸ್ಥಾನಕ್ಕೆ ಮತ್ತು ಗೌರವಕ್ಕೆ ಸ್ಥಾನಕ್ಕೆ ಚ್ಯುತಿ ಆಗುವಂತಹ ಕೆಲಸ ಮಾಡಲಾಗುತ್ತಿದೆ. ರಾಜ್ಯಪಾಲರು ಒಳ್ಳೆಯವರಾದರೂ ಅವರಿಂದ ಈ ರೀತಿಯ ಕೆಲಸ ಮಾಡಿಸಲಾಗುತ್ತಿದೆ. ಅವರಿಗೆ ಎಷ್ಟೇ ಒತ್ತಡ ಇದ್ದರು ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಕರ್ನಾಟಕದ ರಾಜ್ಯಪಾಲರು ಈ ಹಿಂದೆ ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಅವರು ಯಾವ ಸಮುದಾಯಕ್ಕೆ ಸೇರಿದವರು ಗೊತ್ತಿರಲಿಲ್ಲ. ಬಿಜೆಪಿ ವಿವಕ್ಕೆ ಜಾತಿ ಬಣ್ಣ ಬಳಿ ತೊಡಗಿದೆ. ಅವರನ್ನು ಕೇಂದ್ರ ಸಂಪುಟದಲ್ಲಿ ಕೂರಿಸಿಕೊಳ್ಳಬಹುದಿತ್ತು. ಏಕೆ ರಾಜ್ಯಪಾಲರನ್ನ ಮಾಡಿದರೋ ಗೊತ್ತಿಲ್ಲ" ಎಂದು ವ್ಯಂಗ್ಯವಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ